ಮೆಟ್ರೋ ಪ್ರಯಾಣ ದರ ಹೆಚ್ಚಳ ಸಮಿತಿ ತೀರ್ಮಾನ; ಸರ್ಕಾರ ಹಸ್ತಕ್ಷೇಪ ಇಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು: “ಮೆಟ್ರೋ ಪ್ರಯಾಣ ದರ ಹೆಚ್ಚಳದ ಬಗ್ಗೆ ಬಿಎಂಆರ್ ಸಿಎಲ್ ತೀರ್ಮಾನ ಮಾಡುತ್ತದೆ. ಇದಕ್ಕಾಗಿ ನ್ಯಾಯಮೂರ್ತಿ ನೇತೃತ್ವದಲ್ಲಿ ಕೇಂದ್ರದ ಸಮಿತಿ ರಚಿಸಲಾಗಿದ್ದು, ಸರ್ಕಾರ ಇದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.
ಬೆಂಗಳೂರು ಅಭಿವೃದ್ದಿಗೆ ಸಂಬಂಧಿಸಿದ ಇಲಾಖೆಗಳು, ಪ್ರಾಧಿಕಾರದ ಅಧಿಕಾರಿಗಳ ಜೊತೆ ನಗರ ಪ್ರದಕ್ಷಿಣೆ ನಡೆಸಿದ ನಂತರ ಬಿಎಂಆರ್ ಸಿಎಲ್ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಶಿವಕುಮಾರ್ ಅವರು ಗುರುವಾರ ಮಾತನಾಡಿದರು.
ಮೆಟ್ರೋ ಪ್ರಯಾಣ ಟಿಕೆಟ್ ಹಾಗೂ ಕುಡಿಯುವ ನೀರಿನ ದರ ಹೆಚ್ಚಳದ ಬಗ್ಗೆ ಕೇಳಿದಾಗ, “ಮೆಟ್ರೋ ಪ್ರಯಾಣ ದರ ಏರಿಕೆ ಬಗ್ಗೆ ಸಮಿತಿ ವರದಿ ಸಲ್ಲಿಕೆ ಮಾಡಿದೆ. ಈಗಾಗಲೇ ನಿಗಮವು ಒಂದು ತೀರ್ಮಾನ ತೆಗೆದುಕೊಂಡಿದೆ. ನಾನು ಆ ವರದಿಯಲ್ಲಿ ಏನಿದೆ ಎಂದು ಮೂಗು ತೂರಿಸಲು ಹೋಗುವುದಿಲ್ಲ” ಎಂದರು.
ನೀರಿನ ದರ ಏರಿಕೆ ಬಗ್ಗೆ ಸಂಪುಟದಲ್ಲಿ ಚರ್ಚೆ: ನೀರಿನ ದರ ಏರಿಕೆ ಬಗ್ಗೆ ಕೇಳಿದಾಗ, “ಕುಡಿಯುವ ನೀರಿನ ದರ ಏರಿಕೆ ವಿಚಾರವನ್ನು ಸಚಿವ ಸಂಪುಟ ಸಭೆಯ ಮುಂದೆ ಇಡಲಾಗುವುದು. ನೀರಿನ ದರ ಏರಿಕೆಯಾಗಿ 14 ವರ್ಷಗಳಾಗುತ್ತಾ ಬಂದಿದೆ. ಮಂಡಳಿಗೆ ವರ್ಷಕ್ಕೆ ₹ 1 ಸಾವಿರ ಕೋಟಿ ನಷ್ಟವಾಗುತ್ತಿರುವ ಕಾರಣಕ್ಕೆ ದರ ಏರಿಕೆ ಅನಿವಾರ್ಯವಾಗಿದೆ. ಬಿಡ್ಲ್ಯೂ ಎಸ್ ಎಸ್ ಬಿ ಅವರು ಈಗಾಗಲೇ ವರದಿ ನೀಡಿದ್ದು ಇದನ್ನು ಕ್ಯಾಬಿನೆಟ್ ಮುಂದೆ ಇಡಲಾಗುವುದು” ಎಂದರು.


