ಬೆಂಗಳೂರು: ಬಹುಕೋಟಿ ವಂಚನೆಯ ಆರೋಪದಲ್ಲಿ ಬಂಧಿತರಾಗಿರುವ ಐಶ್ವರ್ಯಾ ಗೌಡಗೆ ಅನೇಕ ದೊಡ್ಡದೊಡ್ಡವರ ಸಿಡಿಆರ್ ಪಡೆಯಲು ಸಹಾಯ ಮಾಡಿದ ಆರೋಪ ಪೊಲೀಸರ ಮೇಲೆಯೇ ಕೇಳಿಬಂದಿದೆ.
ಐಶ್ವರ್ಯಾ ಗೌಡ ವಿರುದ್ಧದ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿರುವ ದೂರಿನ ತನಿಖೆ ನಡೆಸುತ್ತಿರುವ ಎಸಿಪಿ ಭರತ್ ರೆಡ್ಡಿ, ಈ ಸಂಬಂಧ ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ.
ಈ ದೂರಿನ ಅನ್ವಯ ತನಿಖೆ ನಡೆಸಲು ಸೂಚನೆ ನೀಡಿರುವ ಪೊಲೀಸ್ ಆಯುಕ್ತ ಬಿ.ದಯಾನಂದ್, ವಿಜಯನಗರ ಎಸಿಪಿ ಚಂದನ್ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಸಲು ಆದೇಶ ನೀಡಿದ್ದಾರೆ. ಕ್ರಿಮಿನಲ್ ಜತೆಗೆ ಪೊಲೀಸ್ ಅಧಿಕಾರಿಗಳು ಭಾಗಿಯಾಗಿರುವ ಕುರಿತು ಆಕ್ಷೇಪ ವ್ಯಕ್ತಪಡಿಸಿರುವ ಅವರು, ಯಾವುದೇ ಅಧಿಕಾರಿಯಿದ್ದರೂ ಮಲಾಜಿಲ್ಲದೆ ತನಿಖೆ ನಡೆಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
ಕ್ರಿಮಿನಲ್ ಪ್ರಕರಣಗಳ ತನಿಖೆಯ ಹೊರತು ಯಾವುದೇ ವ್ಯಕ್ತಿಯ ಸಿಡಿಆರ್ ಮಾಹಿತಿಯನ್ನು ಪೊಲೀಸರು ಪಡೆಯುವಂತಿಲ್ಲ. ಆದರೆ, ಯಾವುದೇ ಪ್ರಕರಣವಿಲ್ಲದೆ, ಸಿಡಿಆರ್ ಮಾಹಿತಿಯನ್ನು ಟಿಲಿಕಾಂ ಕಂಪನಿಯಿAದ ಪಡೆದು, ಐಶ್ವರ್ಯಾ ಗೌಡಗೆ ನೀಡಿರುವ ವಿಷಯ ಬೆಳಕಿಗೆ ಬಂದಿದೆ. ಹೀಗಾಗಿ, ದೂರು ದಾಖಲಾಗಿದೆ.
ತನಿಖಾ ತಂಡದ ಮುಖ್ಯಸ್ಥರಾಗಿರುವ ಎಸಿಪಿ ಚಂದನ್, ನಟ ದರ್ಶನ್ ಆರೋಪಿಯಾಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತನಿಖೆಯ ಮುಂಚೂಣಿ ವಹಿಸಿದ್ದರು. ಆ ವೇಳೆ ಅವರ ದಕ್ಷತೆಯ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬಂದಿದ್ದವು.