ಮೈಸೂರು: ಪ್ರಯಾಗ್ ರಾಜ್ನಲ್ಲಿ ಕುಂಭಮೇಳ ನಡೆಯುತ್ತಿರುವ ಬೆನ್ನಲ್ಲೇ ದಕ್ಷಿಣದ ಕಾವೇರಿ ನದಿಯ ಕುಂಭಮೇಳಕ್ಕೆ ಸಕಲ ಸಿದ್ಧತೆಗಳು ನಡೆದಿದ್ದು, ಇಂದು ಮೂರು ದಿನಗಳ ಕುಂಭಮೇಳಕ್ಕೆ ಚಾಲನೆ ಸಿಗಲಿದೆ.
ಈಗಾಗಲೇ, ಕುಂಭಮೇಳಕ್ಕೆ ಮುಜರಾಯಿ ಇಲಾಖೆಯಿಂದ 6 ಕೋಟಿ ರು.ಗಳ ಅನುದಾನ ಬಿಡುಗಡೆಯಾಗಿದ್ದು, ಜಿಲ್ಲಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಕುಂಭಮೇಳ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿದ್ದು, ಫೆ.12ರಂದು ಕುಂಭಸ್ನಾನ ಕಾರ್ಯಕ್ರಮ ನಡೆಯಲಿದೆ.
ಟಿ.ನರಸೀಪುರ ಕಾವೇರಿ, ಕಪಿಲಾ ಮತ್ತು ಸ್ಫಟಿಕ ಸರೋವರ ನದಿಗಳು ಸಂಗಮವಾಗುವ ತ್ರಿವೇಣಿ ಸಂಗಮವಾಗಿದ್ದು, ಇಲ್ಲಿ ಕುಂಭಮೇಳದ ಆಯೋಜನೆ ಮಾಡಲಾಗಿದೆ. ಮೂರು ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ವಿವಿಧ ಆಧ್ಯಾತ್ಮಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಫೆ.12 ರ ಬುಧವಾರ ಪವಿತ್ರ ಕುಂಭಸ್ನಾನ ನಡೆಯಲಿದೆ. ಬೆಳಗ್ಗೆ 11 ರಿಂದ 11.30 ರವರೆಗೆ ಮತ್ತು ಮಧ್ಯಾಹ್ನ 1.30 ರಿಂದ 2 ಗಂಟೆವರೆಗೆ ಪವಿತ್ರ ಮಾಘಸ್ನಾನ ಮುಹೂರ್ತವಿದೆ. ಈ ವೇಳೆ ಅಪಾರ ಸಂಖ್ಯೆಯ ಭಕ್ತರು ಆಗಮಿಸುವ ನಿರೀಕ್ಷೆಯಿದೆ.