ಅಹಮದಾಬಾದ್: ಮದುವೆ ಆಗುವುದಾಗಿ ಭರವಸೆ ನೀಡಿ ವಿದ್ಯಾರ್ಥಿಯನ್ನೇ ಅತ್ಯಾಚಾರ ಮಾಡಿ, ವಂಚಿಸಿದ್ದ ೫೨ ಶಿಕ್ಷಕನಿಗೆ ಸಿಬಿಐ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
52 ವರ್ಷದ ಶಿಕ್ಷಕ ಧವಲ್ ತ್ರಿವೇದಿ, ವಿದ್ಯಾರ್ಥಿಯನ್ನು ಮದುವೆಯಾಗುವುದಾಗಿ ನಂಬಿಸಿ ಕರೆದೊಯ್ದಿದ್ದು, ಈ ವೇಳೆ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದ. ಗರ್ಭಿಣಿಯಾಗಿದ್ದ ಆಕೆಯನ್ನು ನಂತರ ಬಿಟ್ಟು ಪರಾರಿಯಾಗಿದ್ದ. ಈ ಪ್ರಕರಣದ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯ ಆತನನ್ನು ಆರೋಪಿ ಎಂದು ಪರಿಗಣಿಸಿ ಜೀವಾವಧಿ ಶಿಕ್ಷೆ ವಿಧಿಸಿದೆ.
ತ್ರಿವೇದಿ ಈ ಹಿಂದೆಯೂ ಇಬ್ಬರು ಯುವತಿಯೊಂದಿಗೆ ಇದೇ ರೀತಿ ಮದುವೆಯಾಗುವುದಾಗಿ ಓಡಿ ಹೋಗಿ ನಂತರ ಅವರನ್ನು ಗರ್ಭಿಣಿಯರನ್ನಾಗಿ ಮಾಡಿ ವಂಚಿಸಿದ್ದ. ಈ ಹಿಂದೆಯೂ ನ್ಯಾಯಾಲಯ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದೀಗ ಆತನ ಮೇಲೆ 2 ನೇ ಬಾರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಹಿಂದಿನ ಪ್ರಕರಣದಲ್ಲಿ ರಾಜ್‌ಕೋಟ್ ಜಿಲ್ಲೆಯ ಪದವಾರಿ ಎಂಬಲ್ಲಿ ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರೊಂದಿಗೆ ಓಡಿಹೋಗಿದ್ದ ತ್ರಿವೇದಿಯ ವಂಚನೆಯನ್ನು ಪರಿಗಣಿಸಿದ ನ್ಯಾಯಾಲಯ, ವಂಚನೆಯನ್ನೇ ಆಯುಧವನ್ನಾಗಿ ಇಟ್ಟುಕೊಂಡಿರುವ ಆರೋಪಿ, ವಿದ್ಯಾರ್ಥಿ-ಶಿಕ್ಷಕ ಸಂಬAಧದ ಗೌರವವನ್ನೇ ಕಳೆದಿದ್ದಾನೆ ಎಂದಿದೆ.
ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ಡಿ.ಗ್ರಾನಾ ಆರೋಪಿಗೆ ಜೀವಾವಧಿ ಶಿಕ್ಷೆಯನ್ನು ನೀಡುವ ಜತೆಗೆ 7 ಲಕ್ಷ ರು. ದಂಡವನ್ನು ವಿಧಿಸಿದೆ. ಜತೆಗೆ ಈ ಅಂಶವನ್ನು ಆತನ ಜೈಲು ದಾಖಲೆಗಳಲ್ಲಿ ಇಡಲು ಸೂಚನೆ ನೀಡಿದೆ.
ಕಳೆದ ಜೀವಾವಧಿ ಶಿಕ್ಷೆ ವೇಳೆ ಜೈಲಿನಿಂದ ಪೆರೋಲ್ ಪಡೆದು ಬಂದಾಗಲೇ, ಹೆಸರು ಬದಲಾಯಿಸಿಕೊಂಡು ಮತ್ತೊಬ್ಬ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಿದ್ದಾನೆ. ಹೀಗಾಗಿ, ಪೆರೋಲ್ ನೀಡುವಾಗಿ ಇದನ್ನು ಪರಿಗಣಿಸಬೇಕು ಎಂದು ನ್ಯಾಯಾಲಯ ಹೇಳಿದೆ.
2018 ರಲ್ಲಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಗುಜರಾತ್ ಹೈಕೋರ್ಟ್ ಆದೇಶ ನೀಡಿತ್ತು. ಸಿಬಿಐ ತನಿಖೆ ನಡೆಸಿ, ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಕೆ ಮಾಡಿತ್ತು. ಇದೀಗ ವಿಚಾರಣೆ ನಡೆಸಿದ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿದೆ. ಪ್ರಾಸಿಕ್ಯೂಷನ್ ಈತನಿಗೆ ಗಲ್ಲು ಶಿಕ್ಷೆ ನೀಡುವಂತೆ ಮನವಿ ಮಾಡಿತ್ತು.