ರಸ್ತೆ ಸುರಕ್ಷತೆ ಜಾಗೃತಿ ಅಭಿಯಾನ 2025 ಕಾರ್ಯಕ್ರಮದಲ್ಲಿ ಪಿಐ ಬಿ.ಎಸ್.ಅಶೋಕ್ ಹೇಳಿಕೆ.
ಹೊಸಕೋಟೆ: ಪ್ರಸ್ತುತ ಸಂಚಾರಿ ನಿಯಮ ಉಲ್ಲಂಘಿಸುವ ವಾಹನ ಸವಾರರ ಮೇಲೆ ನಿಗಾ ಇಡುವ ಕಾರಣಕ್ಕಾಗಿ ಹೆಚ್ಚು ಸುಧಾರಿತ ತಂತ್ರಜ್ಞಾನಾಧಾರಿತ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಆದ್ದರಿಂದ ಸಂಚಾರಿ ನಿಯಮ ಉಲ್ಲಂಘನೆಯಿAದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೊಸಕೋಟೆ ಪೊಲೀಸ್ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಬಿ.ಎಸ್.ಅಶೋಕ್ ಹೇಳಿದರು.
ಅವರು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ನೆಹರು ಯುವ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತೆ ಜಾಗೃತಿ ಅಭಿಯಾನ 2025ರ ಅಂಗವಾಗಿ ನಡೆದ ಜಾತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಂಚಾರಿ ನಿಯಮ ಉಲ್ಲಂಘಿಸಿದ ಸವಾರರ ವಾಹನಗಳ ಎಚ್‌ಎಸ್‌ಆರ್‌ಪಿ ಸಂಖ್ಯೆಯ ಆಧಾರವಾಗಿ ನಮ್ಮ ಮೊಬೈಲ್‌ಗೆ ದಂಡದ ಸಂದೇಶದೊAದಿಗೆ ಮನೆಗೆ ನೋಟೀಸ್ ಬರುತ್ತದೆ. ಆದ್ದರಿಂದಲೇ ಇಂದು ಎಲ್ಲೆಂದರಲ್ಲಿ ವಾಹನ ಸವಾರರನ್ನು ತಡೆದ ಪೊಲೀಸರು ದಂಡ ವಿಧಿಸುವ ಘಟನೆಗಳು ನಡೆಯುತ್ತಿಲ್ಲ. ಆದ್ದರಿಂದ ವಾಹನ ಸವಾರರು ಸಂಚಾರಿ ನಿಯಮಗಳ ಪಾಲನೆಗೆ ಆದ್ಯತೆ ನೀಡಬೇಕು ಎಂದು ಸೂಚಿಸಿದರು.
ವಾಹನವನ್ನು ತಮ್ಮಿಷ್ಟದಂತೆ ಬದಲಾಯಿಸಿಕೊಳ್ಳುವುದು, ವೀಲಿಂಗ್ ಮಾಡುವುದು, ಅತಿ ವೇಗದಲ್ಲಿ ವಾಹನ ಸಂಚಾರ ಮಾಡುವುದು, ಇನ್ನು ಹಲವು ಕಾನೂನು ವಿರೋಧಿ ಚಟುವಟಿಕೆಗಳ ಮೂಲಕ ಕ್ರಿಮಿನಲ್ ಕೇಸ್‌ಗಳಲ್ಲಿ ಸಿಕ್ಕಿ ಹಾಕಿಕೊಂಡರೆ ತಮ್ಮ ಭವಿಷ್ಯ ಸಮಸ್ಯೆಯಲ್ಲಿ ಸಿಕ್ಕಿಕೊಳ್ಳುತ್ತದೆ, ಪೊಲೀಸ್ ದಾಖಲೆಗಳಲ್ಲಿ ದೇಶದ ಯಾವುದೇ ಮೂಲೆಯಲ್ಲಿ ನಿಮ್ಮ ಮೇಲೆ ಕ್ರಿಮಿನಲ್ ಕೇಸ್ ಇದ್ದಲ್ಲಿ ಸರ್ಕಾರಿ ಉದ್ಯೋಗದಿಂದ ವಂಚಿತರಾಗುತ್ತೀರಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಮಲಿಂಗಪ್ಪ ಟಿ.ಬೇಗೂರು ಅವರು ಮಾತನಾಡಿ ವಾಹನ ಸವಾರರು ತುಂಬ ಎಚ್ಚರಿಕೆಯಿಂದ ವಾಸಹನ ಚಾಲನೆ ಮಾಡುವ ಜೊತೆಗೆ ಪಾದಚಾರಿಗಳಿಗೆ ನಡೆದಾಡಲು ಅನುವು ಮಾಡಿಕೊಡಬೇಕು. ಎಲ್ಲಾದರೂ ಅಪಘಾತವಾದಾಗ ವಿಡಿಯೋ ಮಾಡುವುದನ್ನು ಬಿಟ್ಟು, ಅವರನ್ನು ಸಾಧ್ಯವಾದಷ್ಟು ರಕ್ಷಿಸುವ ಕೆಲಸವನ್ನು ಮಾಡಬೇಕು. ಎಲ್ಲಕ್ಕಿಂತಲೂ ಮುಖ್ಯವಾಗಿ ಮಾನವೀಯತೆ ಮುಖ್ಯ ಎಂದರು.
ಕಾರ್ಯಕ್ರಮದ ನಿಮಿತ್ತ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಕೆಇಬಿ ವೃತ್ತದವರೆಗೆ ರಸ್ತೆ ಸುರಕ್ಷತೆಯ ಜಾಗೃತಿ ಮೂಡಿಸುವ ಘೋಷಣೆಗಳನ್ನು ಕೂಗುತ್ತಾ ಜಾತಾ ಕಾರ್ಯಕ್ರಮವನ್ನು ನಡೆಸಿದರು. ರಸ್ತೆಯುದ್ದಕ್ಕೂ ಹೆಲ್ಮೆಟ್ ಧರಿಸದೆ ವಾಹನಗಳನ್ನು ಸವಾರಿ ಮಾಡುತ್ತಿದ್ದವರಿಗೆ ರೋಜಾ ಹೂಗಳನ್ನು ನೀಡುತ್ತಾ, ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಮಾಡುವುದರಿಂದ ಆಗುವ ತೊಂದರೆಯ ಬಗ್ಗೆ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ನೆಹರು ಯುವ ಕೇಂದ್ರದ ಜಿಲ್ಲಾಧಿಕಾರಿ ಶ್ರೀವಾಣಿ ಕೋನರೆಡ್ಡಿ, ಸಂಚಾರಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ರಮೇಶ್, ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ.ದೊಡ್ಡಹನುಮಯ್ಯ, ಪ್ರೊ.ಈರಣ್ಣ, ಪ್ರೊ.ರವಿಚಂದ್ರ, ಪ್ರೊ.ರವಿಕುಮಾರ್, ಪ್ರೊ.ಕವಾಲಯ್ಯ, ಪ್ರೊ.ಅಶೋಕ್‌ಕುಮಾರ್, ಪ್ರೊ.ವಿಶ್ವೇಶ್ವರಯ್ಯ, ಪ್ರೊ.ಶ್ರೀನಿವಾಸ್ ಆಚಾರ್, ಶೋಭಾ.ಕೆ ಇದ್ದರು.