ಪ್ರಚೋದನಕಾರಿ ಪೋಸ್ಟ್ ಹಾಕಿದ್ದವನಿಗೆ ನ್ಯಾಯಾಂಗ ಬಂಧನ
ಮೈಸೂರು: ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಗಲಭೆಗೆ ಕಾರಣವಾಗಿದ್ದ ವಿವಾದಾತ್ಮಕ ಪೋಸ್ಟ್ ಹಾಕಿದ್ದ ಸುರೇಶ್ಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಪ್ರಚೋಧನಕಾರಿ ಪೋಸ್ಟ್ ಹಾಕಿದ್ದ ಕಾರಣಕ್ಕೆ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಗಲಭೆ ಉಂಟಾಗಿತ್ತು. ಆತನ ಮೇಲೆ ದಾಖಲಾದ ದೂರಿನ ಅನ್ವಯ ಪೊಲೀಸರು, ಸುರೇಶ್ನನ್ನು ಬಂಧಿಸಿದ್ದರು.
ಬೆಳಗ್ಗೆ ಮೈಸೂರಿನ 2 ನೇ ಸಿವಿಲ್ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದ ಪೊಲೀಸರು, ಆತನನ್ನು ವಿಚಾರಣೆಗೆ ಪೊಲೀಸ್ ಕಸ್ಟಡಿಗೆ ನೀಡುವಂತೆ ನ್ಯಾಯಾಲಯ ಆದೇಶ ನೀಡಿತ್ತು.
ನ್ಯಾಯಾಲಯದ ಆದೇಶದಂತೆ ಆತನನ್ನು ಬೆಳಗ್ಗೆಯಿಂದಲೇ ವಿಚಾರಣೆಗೆ ಒಳಪಡಿಸಿದ್ದ ಪೊಲೀಸರು, ಅವಧಿಗೆ ಮುನ್ನವೇ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಈ ವೇಳೆ ಸ್ಥಳ ಮಹಜರು, ಆತ ಪೋಸ್ಟ್ ಮಾಡಲು ಬಳಸಿದ್ದ ಮೊಬೈಲ್ ವಶಕ್ಕೆ ಪಡೆದು, ತನಿಖೆ ಮುಗಿಸಿ ಶುಕ್ರವಾರ ಸಂಜೆಯೇ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.
ಈ ವೇಳೆ ಆರೋಪಿ ಪರ ವಕೀಲ, ಹ.ಮಾ ಭಾಸ್ಕರ್, ಆರೋಪಿಗೆ ಜಾಮೀನು ನೀಡುವಂತೆ ನ್ಯಾಯಾಲಯದ ಮುಂದೆ ಮನವಿ ಮಾಡಿದ್ದರು. ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು, ಶನಿವಾರಕ್ಕೆ ತೀರ್ಪು ಕಾಯ್ದಿರಿಸಿದರು.


