ಮಂಡ್ಯ: ಪಾಂಡವಪುರದ ಮೈ ಷುಗರ್ ಸಕ್ಕರೆ ಕಾರ್ಖಾನೆಯ 501 ಅಡಿ ಎತ್ತರದ ಚಿಮಣಿಯ ಮೇಲೇರಿ ನೌಕರನೊಬ್ಬ ಕುಳಿತಿದ್ದು, ಆತಂಕಕ್ಕೆ ಕಾರಣವಾಗಿದೆ.
ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ 20 ಗುತ್ತಿಗೆ ಕಾರ್ಮಿಕರನ್ನು ವಜಾಗೊಳಿಸಿ ಆದೇಶ ನೀಡಿತ್ತು. ಹೀಗಾಗಿ, ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದರು. ಅದರಲ್ಲೊಬ್ಬ ನೌಕರ ಏಕಾಏಕಿ ಅಷ್ಟು ಎತ್ತರದ ಚಿಮಿಣಿ ಮೇಲೇರಿ ಕುಳಿತಿದ್ದಾನೆ ತನ್ನ ಬೇಡಿಕೆ ಈಡೇರುವರೆಗೆ ಕೆಳಗಿಳಿಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾನೆ.
ಸ್ಥಳಕ್ಕೆ ಪೊಲೀಸರು, ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಅಧಿಕಾರಿಗಳು ಆಗಮಿಸಿ ಆತನ ಮನವೊಲಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಆತನ ಜತೆಗೆ ಅಷ್ಟು ದೂರ ಮಾತನಾಡುವುದೇ ಅಧಿಕಾರಿಗಳಿಗೆ ಸವಾಲಾಗಿದೆ. ಆತ ಮೇಲೇರುವಾಗ ಮೊಬೈಲ್ ಜತೆಗೆ ಹತ್ತಿದ್ದ, ಆದರೆ, ಈಗ ಆತನ ಮೊಬೈಲ್ ಸ್ವಿಚ್ ಆಫ್ ಬರುತ್ತಿದೆ ಎಂದು ಹೇಳಲಾಗುತ್ತಿದೆ.
ಏನಾದರೂ ಅಪಾಯವಾಗುವ ಮೊದಲು ಆತನನ್ನು ಕೆಳಗಿಳಿಸುವ ಪ್ರಯತ್ನ ನಡೆಯುತ್ತಿದ್ದು, ಅಧಿಕಾರಿಗಳು ಪ್ರತಿಭಟನೆ ನಡೆಸುತ್ತಿರುವ ಸಿಬ್ಬಂದಿಯ ವಜಾ ಆದೇಶ ತೆರವುಗೊಳಿಸುವ ಭರವಸೆ ನೀಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಅಗ್ನಿಶಾಮಕ ಸಿಬ್ಬಂದಿ ಚಿಮಣಿಯ ಬಳಿ ಆಗಮಿಸಿದ್ದು, ಆತನ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಿದ್ಧತೆ ನಡೆಸುತ್ತಿದ್ದಾರೆ.
Updating…