ಬೆಂಗಳೂರು: ರಾಜ್ಯ ಸರಕಾರ ಗ್ಯಾರಂಟಿ ಯೋಜನೆಯಡಿಯಲ್ಲಿ ಅನ್ನಭಾಗ್ಯಕ್ಕೆಂದು ನೀಡುತ್ತಿದ್ದ 170 ರು. ಹಣದ ಬದಲಿಗೆ ಇನ್ನು ಮುಂದೆ ಅಕ್ಕಿಯನ್ನು ಕೊಡಲು ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯ ಸರಕಾರ ಅಧಿಕಾರಕ್ಕೆ ಬಂದಾಗ ಪ್ರತಿ ಫಲಾನುಭವಿಗೆ 10 ಕೆ.ಜಿ ಅಕ್ಕಿ ಕೊಡುವ ಭರವಸೆ ನೀಡಿತ್ತು. ಈ ವೇಳೆ ಕೇಂದ್ರ ಸರಕಾರ ಹೆಚ್ಚುವರಿ ಅಕ್ಕಿ ಕೊಡಲು ನಿರಾಕರಿಸಿತ್ತು. ಈ ವೇಳೆ ಕೇಂದ್ರ ಹಾಗೂ ರಾಜ್ಯ ಸರಕಾರದ ನಡುವೆ ಜಿದ್ದಾಜಿದ್ದಿ ನಡೆದು, ಕೊನೆಗೆ ಅಕ್ಕಿಯ ಬದಲು ಹಣವನ್ನೇ ನೀಡಲು ಸರಕಾರ ಮುಂದಾಗಿತ್ತು.
ಅದರಂತೆ ಪ್ರತಿ ತಿಂಗಳ ಪ್ರತಿಯೊಬ್ಬ ಫಲಾನುಭವಿಗೆ 170 ರು.ಗಳಂತೆ ಆ ಕುಟುಂಬದ ಯಜಮಾನಿಯ ಖಾತೆಗೆ ಹಣವನ್ನು ಜಮೆ ಮಾಡಲಾಗುತ್ತಿತ್ತು. ಇದೀಗ ಎರಡು ತಿಂಗಳಿಂದ ಆ ಹಣ ಬಂದಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಈ ಆರೋಪ ಕೇಳಿಬರುತ್ತಿದ್ದಂತೆ, ಇದೀಗ ಅಕ್ಕಿಯನ್ನು ಕೊಡುವುದಾಗಿ ಸರಕಾರ ಹೇಳುತ್ತಿದೆ.
ಕೆಲ ದಿನಗಳ ಹಿಂದೆ ಕೇಂದ್ರದಲ್ಲಿ ಸಂಗ್ರಹವಿದ್ದ ಅಕ್ಕಿಯನ್ನು ಕೊಡಲು ಸಿದ್ಧ ಎಂದು ಕೇಂದ್ರ ಸರಕಾರ ಹೇಳಿತ್ತು. ರಾಜ್ಯ ಸರಕಾರವೂ ಬೇರೆ ರಾಜ್ಯಗಳಿಂದ ಖರೀದಿಗೆ ಚಿಂತನೆ ನಡೆಸಿತ್ತು. ಈ ನಡುವೆ ಅಕ್ಕಿಯ ದಾಸ್ತಾನು ಇದ್ದು, ಈ ತಿಂಗಳಿಂದಲೇ ಅಕ್ಕಿ ವಿತರಣೆ ಮಾಡಲಾಗುತ್ತದೆ ಹಾಗಾಗಿಯೇ ಅಕ್ಕಿ ಹಣವನ್ನು ಅಕೌಂಟ್ ಗೆ ಪಾವತಿ ಮಾಡಿಲ್ಲ ಎಂದು ಆಹಾರ ಸರಬರಾಜು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.