ಚೆನ್ನೈ: ಉತ್ತರ ಭಾರತದ ಹಲವು ಭಾಷೆಗಳನ್ನು ಈಗಾಗಲೇ ಹಿಂದಿ ಅಪೋಷಣೆ ತೆಗೆದುಕೊಂಡಿದ್ದು, ಅದೇ ಮಾದರಿಯಲ್ಲಿ ತಮಿಳು ಭಾಷೆಯನ್ನು ಅಳಿಸಿ ಹಾಕುತ್ತದೆ ಎಂದು ತಮಿಳುನಾಡು ಡಿಸಿಎಂ ಉದಯನಿಧಿ ಸ್ಟಾಲಿನ್ ಗುಡುಗಿದ್ದಾರೆ.
ಕೇಂದ್ರ ಬಜೆಟ್ನಲ್ಲಿ ಅನುದಾನ ಹಂಚಿಕೆ ಮತ್ತು ಶೈಕ್ಷಣಿಕ ಅನ್ಯಾಯದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ರಾಜಸ್ಥಾನಿ, ಹರಿಯಾಣವಿ, ಭೋಜ್ಪುರಿ ಮತ್ತು ಬಿಹಾರಿ ಭಾಷೆಗಳಂತಹ ಉತ್ತರ ಭಾರತೀಯ ಭಾಷೆಗಳನ್ನು ಈಗಾಗಲೇ ಹಿಂದಿ ನಾಶಪಡಿಸಿದೆ. ತಮಿಳುನಾಡಿನಲ್ಲಿಯೂ ಹಿಂದಿ ಜಾರಿಗೆ ತಂದರೆ ಇಂತಹದ್ದೇ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ವಿದೇಶಗಳಲ್ಲಿ ಕೆಲಸ ಮಾಡುತ್ತಿರುವ ಮತ್ತು ಇಸ್ರೋದಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಶೇ.99 ರಷ್ಟು ತಮಿಳರು ಹಿಂದಿಯನ್ನೇ ಕಲಿಯದೆ ತಮಿಳು ಸರಕಾರಿ ಶಾಲೆಗಳಿಂದ ಬಂದವರು. ತಳಮುತ್ತು, ನಟರಾಜನ್ ಮತ್ತು ಕೀಜಪಾಲೂರು ಚಿನ್ನಸ್ವಾಮಿ ಅವರಂತಹ ಹುತಾತ್ಮರು ರಾಜಕೀಯಕ್ಕಾಗಿ ಅಲ್ಲ, ತಮಿಳು ಭಾಷೆಗಾಗಿ ಪ್ರಾಣ ಕಳೆದುಕೊಂಡರು ಎಂದು ತಿಳಿಸಿದರು.
ಬಿಜೆಪಿ ಸರಕಾರ ಇದೇ ಮನಸ್ಥಿತಿ ಮುಂದುವರಿಸಿದರೆ, ಪ್ರತಿಭಟನೆ ಮತ್ತಷ್ಟು ಉಗ್ರಸ್ವರೂಪ ಪಡೆಯಲಿದೆ ಎಂದು ಎಚ್ಚರಿಕೆ ನೀಡಿದ ಉದಯನಿಧಿ, ಗೋ ಬ್ಯಾಕ್ ಮೋದಿ ಪ್ರತಿಭಟನೆಗಳು ಹೆಚ್ಚಾಗುತ್ತವೆ. ಇದು ಪೆರಿಯಾರ್ ಭೂಮಿ, ಅಣ್ಣಾ ಅವರ ಭೂಮಿ, ಕಲೈನಾರ್ ಅವರ ಭೂಮಿ, ಸಿಎಂ ಸ್ಟಾಲಿನ್ ಆಳ್ವಿಕೆ ಮಾಡುತ್ತಿರುವ ಸ್ವಾಭಿಮಾನದ ಭೂಮಿ ಎಂದು ಗುಡುಗಿದ್ದಾರೆ.