ಅಪರಾಧ ಸುದ್ದಿ

ಹೇಮಾವತಿ ಎಡದಂಡೆ ನಾಲೆ ಆಧುನೀಕರಣ ಕಾಮಗಾರಿಯಲ್ಲಿ ಭಾರಿ ಭ್ರಷ್ಟಾಚಾರ ಆರೋಪ

Share It

ಮಂಡ್ಯ: ಬೆಲ್ಲದ ನಾಡು, ಭತ್ತದ ನಾಡು ಮಂಡ್ಯ ಜಿಲ್ಲೆಯ ಜೀವನಾಡಿ ಕೆ.ಆರ್.ಎಸ್ ಡ್ಯಾಂ. ಜಿಲ್ಲೆಯ 7 ತಾಲ್ಲೂಕುಗಳ ಪೈಕಿ 5 ತಾಲ್ಲೂಕುಗಳು ಮಾತ್ರ ಕೆ.ಆರ್.ಎಸ್ ಅಚ್ಚುಕಟ್ಟು ವ್ಯಾಪ್ತಿಗೆ ಬಂದ್ರೆ ಉಳಿದ ಕೆ.ಆರ್.ಪೇಟೆ ಹಾಗೂ ನಾಗಮಂಗಲ ತಾಲ್ಲೂಕುಗಳಿಗೆ ಹಾಸನದ ಹೇಮಾವತಿ ಜಲಾಶಯವೇ ಆಸರೆ. ಈ 2 ತಾಲ್ಲೂಕುಗಳಿಗೆ ನೀರು ಪೂರೈಸುವ ಹೇಮಾವತಿ ಎಡದಂಡೆ ನಾಲೆ ಆಧುನೀಕರಣದ ಹೆಸರಲ್ಲಿ ನೂರಾರು ಕೋಟಿ ಲೂಟಿ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ.

ಅಂದಹಾಗೆ ಈ ನಾಲೆಯನ್ನ ಆಧುನೀಕರಣ ಮಾಡಬೇಕು ಎಂಬುದು ರೈತರ ಬಹಳ ವರ್ಷಗಳ ಬೇಡಿಕೆಯಾಗಿತ್ತು. ಆ ಹಿನ್ನಲೆಯಲ್ಲಿ ಹಿಂದಿನ ಬಿಜೆಪಿ ಸರ್ಕಾರ 140 ಕಿ.ಮೀ ನಾಲೆ ಅಭಿವೃದ್ದಿಗೆ ಮುಂದಾಗಿತ್ತು. ಅದಕ್ಕಾಗಿ 883 ಕೋಟಿ ರೂ. ಯೋಜನೆಯನ್ನ ಸಿದ್ಧಪಡಿಸಿ, ಏಜೆನ್ಸಿಯೊಂದಕ್ಕೆ ಕಾಮಗಾರಿಯ ಗುತ್ತಿಗೆ ನೀಡಿತ್ತು. 2021ರಲ್ಲಿ ಆಧುನೀಕರಣ ಕಾಮಗಾರಿ ಮುಗಿದಿದೆ ಎಂದು ಹಣ ಬಿಡುಗಡೆ ಮಾಡಲಾಗಿದೆ. ಅದ್ರೆ ಕಾಮಗಾರಿ ಮುಗಿದ ಮೂರೇ ವರ್ಷಕ್ಕೆ ಕಾಂಕ್ರೀಟ್ ಕಿತ್ತು ಬರುತ್ತಿದೆ. ಹೀಗಾಗಿ ಇದು ಸಂಪೂರ್ಣವಾಗಿ ಕಳಪೆಯಿಂದ ಕೂಡಿದೆ ಎಂದು ರೈತರು ಆರೋಪಿಸುತ್ತಿದ್ದಾರೆ.

ಅಲ್ಲದೆ ಕೆ.ಆರ್.ಪೇಟೆ ತಾಲ್ಲೂಕಿನ ಪಿ.ಬಿ.ಮಂಚನಹಳ್ಳಿ ಗ್ರಾಮದ ಬಳಿ ಎಸ್ಕೇಪ್ ಗೇಟ್ ಬದಲಾವಣೆ ಮಾಡದಿದ್ರೂ ಗುತ್ತಿಗೆ ಪಡೆದ ಸಂಸ್ಥೆಗೆ ಹಣ ಮಂಜೂರಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಜೊತೆಗೆ ನಾಲೆಗೆ ರಕ್ಷಣಾ ಕಲ್ಲುಗಳನ್ನ ನಿರ್ಮಾಣ ಮಾಡಿದ್ದೇವೆ ಎಂದು 4 ಕೋಟಿ ರೂ. ಹಣವನ್ನು ಸಹ ಅಬೇಸ್ ಮಾಡಿದ್ದಾರೆ. ಈ ಬಗ್ಗೆ ರಾಜ್ಯಸರ್ಕಾರ ಹಾಗೂ ಲೋಕಾಯುಕ್ತಕ್ಕೆ ದೂರು ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಭ್ರಷ್ಟ ಅಧಿಕಾರಿಗಳನ್ನ ಸರ್ಕಾರ ರಕ್ಷಣೆ ಮಾಡುತ್ತಿದೆ ಎಂದು ರೈತರು ಆರೋಪಿಸುತ್ತಿದ್ದಾರೆ.

ಇನ್ನು ಈ ಬಗ್ಗೆ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್ ಅವರಿಗೂ ರೈತರು ದೂರು ನೀಡಿದ್ದು, ತನಿಖೆ ನಡೆಸುವಂತೆ ನೀರಾವರಿ ಇಲಾಖೆಯ ವ್ಯವಸ್ಥಾಪಕರಿಗೆ ಜಿಲ್ಲಾಧಿಕಾರಿಗಳು ಪತ್ರ ಬರೆದಿದ್ದಾರಂತೆ.

ಒಟ್ಟಿನಲ್ಲಿ ಹತ್ತಾರು ವರ್ಷಗಳ ಬೇಡಿಕೆ ಈಡೇರಿತು ಎನ್ನುವ ಸಂಭ್ರಮದಲ್ಲಿದ್ದ ರೈತರಿಗೆ ಕಳಪೆ ಕಾಮಗಾರಿ ಶಾಕ್ ತಂದೊಡ್ಡಿದೆ. ನೂರಾರು ಕೋಟಿ ರೂ. ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದ್ದು, ರಾಜ್ಯಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಬೇಕಿದೆ.


Share It

You cannot copy content of this page