ಕ್ರೀಡೆ ಸುದ್ದಿ

ಚಾಂಪಿಯನ್ಸ್ ಕ್ರಿಕೆಟ್ ಟ್ರೋಫಿ-2025: ಅಫ್ಘಾನಿಸ್ತಾನ ವಿರುದ್ಧ ದ.ಆಫ್ರಿಕಾಕ್ಕೆ ಸುಲಭ ಜಯ

Share It

ಕರಾಚಿ : ಚಾಂಪಿಯನ್ಸ್ ಕ್ರಿಕೆಟ್ ಟ್ರೋಫಿ-2025 ರಲ್ಲಿ ದಕ್ಷಿಣ ಆಫ್ರಿಕಾ ಮೊದಲ ಪಂದ್ಯದಲ್ಲೇ ಸುಲಭ ಗೆಲುವಿನೊಂದಿಗೆ ಪ್ರಾರಂಭಿಸಿದೆ. ಕರಾಚಿಯಲ್ಲಿ ಶುಕ್ರವಾರ ನಡೆದ ಪಂದ್ಯಾವಳಿಯ 3ನೇ ಪಂದ್ಯದಲ್ಲಿ, ಟೆಂಬಾ ಬವುಮಾ ನೇತೃತ್ವದ ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನವನ್ನು 107 ರನ್‌ಗಳಿಂದ ಹೊಸಕಿ ಹಾಕಿ ಬೃಹತ್ ಗೆಲುವು ಸಾಧಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಹರಿಣಗಳ ಪರ ರಯಾನ್ ರಿಕಲ್ಟನ್ ಚೊಚ್ಚಲ ಶತಕ‌ ಬಾರಿಸಿದರು. ಪರಿಣಾಮ ದಕ್ಷಿಣ ಆಫ್ರಿಕಾ ನಿಗದಿತ 50 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 315 ರನ್‌ ಗಳಿಸಿತು. ಈ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನವನ್ನು ಆರಂಭದಿಂದಲೂ ಕಾಡಿದ ದಕ್ಷಿಣ ಆಫ್ರಿಕಾ ಪರ ಕಗಿಸೊ ರಬಾಡ 3 ವಿಕೆಟ್, ಲುಂಗಿ ಎನ್‌ಗಿಡಿ ಮತ್ತು ಮುಲ್ಡರ್ ತಲಾ 2 ವಿಕೆಟ್ ಪಡೆದು ಅಫ್ಘಾನಿಸ್ತಾನ ತಂಡವನ್ನು 43.3 ಓವರ್ ಗಳಲ್ಲಿ 208 ರನ್‌ಗಳಿಗೆ ಆಲೌಟ್ ಆಯಿತು. ಅಫ್ಘಾನಿಸ್ತಾನ ಪರ ರಹಮತ್ ಶಾ 90 ರನ್ ಗಳಿಸಿ ಹರಿವ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಿ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದರು.

ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಟೋನಿ ಡಿ ಜಾರ್ಜಿಯೊ ಅವರನ್ನು ಬೇಗನೆ ಔಟ್ ಮಾಡುವ ಮೂಲಕ ಅಫ್ಘಾನಿಸ್ತಾನ ಉತ್ತಮ ಆರಂಭವನ್ನು ಪಡೆಯಿತು. ಆದರೆ ನಾಯಕ ಬವುಮಾ ಅವರೊಂದಿಗೆ ರಿಕಲ್ಟನ್ 2ನೇ ವಿಕೆಟ್‌ಗೆ ಇವರಿಬ್ಬರ ನಡುವೆ 127 ರನ್‌ಗಳ ಜೊತೆಯಾಟ ನಡೆಸಿದರು. ಇದರಲ್ಲಿ ಮೊದಲು ರಿಕಲ್ಟನ್ ಮತ್ತು ನಂತರ ಬವುಮಾ ಕ್ರಮವಾಗಿ ಅರ್ಧಶತಕಗಳನ್ನು ಪೂರೈಸಿದರು.

ಶೀಘ್ರದಲ್ಲೇ ರಿಕಲ್ಟನ್ ತಮ್ಮ ಏಕದಿನ ವೃತ್ತಿಜೀವನದ ಮೊದಲ ಶತಕವನ್ನು ಪೂರ್ಣಗೊಳಿಸಿದರು. ಅಂತಿಮವಾಗಿ ಅವರು 103 ರನ್ ಗಳಿಸಿ ಔಟಾದರು. ಆದರೆ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್‌ಗಳು ತಮ್ಮ ಆಕ್ರಮಣಕಾರಿ ಹರಿವ ಮುಂದುವರೆಸಿದರು. ರಾಸ್ಸಿ ವ್ಯಾನ್ ಡೆರ್ ಡುಸೆನ್ ಮತ್ತು ಐಡೆನ್ ಮಾರ್ಕ್ರಾಮ್ ಸ್ಫೋಟಕ ಅರ್ಧಶತಕ ಬಾರಿಸಿ ತಂಡವನ್ನು 315 ರನ್‌ಗಳ ಬೃಹತ್ ಮೊತ್ತಕ್ಕೆ ಕೊಂಡೊಯ್ದರು.

316 ರನ್‌ಗಳ ಟಾರ್ಗೆಟ್ ಪಡೆದ ಅಫ್ಘಾನಿಸ್ತಾನವನ್ನು ದಕ್ಷಿಣ ಆಫ್ರಿಕಾದ ವೇಗದ ಬೌಲರ್‌ಗಳು ಆರಂಭದಿಂದಲೇ ಕಾಡಲಾರಂಭಿಸಿದರು. 4ನೇ ಓವರ್‌ನಲ್ಲಿ ಲುಂಗಿ ಎನ್‌ಗಿಡಿ ರಹಮಾನಲ್ಲಾ ಗುರ್ಬಾಜ್ ಅವರನ್ನು ಬಲಿ ಪಡೆದರು. 10 ನೇ ಓವರ್‌ನಲ್ಲಿ ರಬಾಡ, ಇಬ್ರಾಹಿಂ ಜದ್ರಾನ್ ಅವರನ್ನು ಪೆವಿಲಿಯನ್​ಗೆ ಕಳುಹಿಸಿದರು. ಮುಂದಿನ 5 ಓವರ್‌ಗಳಲ್ಲಿ, ಅಫ್ಘಾನಿಸ್ತಾನ ತಂಡವು ನಾಯಕ ಹಶ್ಮತುಲ್ಲಾ ಶಾಹಿದಿ ಮತ್ತು ಸೆಡಿಕುಲ್ಲಾ ಅಟಲ್ ಅವರ ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ವೇಳೆಗೆ ತಂಡದ ಸ್ಕೋರ್ ಕೇವಲ 50 ರನ್‌ಗಳಾಗಿತ್ತು.

ಇದಾದ ನಂತರವೂ ಅಫ್ಘಾನಿಸ್ತಾನದ ವಿಕೆಟ್‌ಗಳು ನಿಗದಿತ ಅಂತರದಲ್ಲಿ ಬೀಳುತ್ತಲೇ ಇದ್ದವು. ಆದರೆ ರೆಹಮತ್ ಶಾ ಇನ್ನೊಂದು ತುದಿಯಿಂದ ದಕ್ಷಿಣ ಆಫ್ರಿಕಾದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿ ಏಕಾಂಗಿಯಾಗಿ ಕ್ರೀಸ್ ನಲ್ಲಿ ನಿಂತು ಕೆಚ್ಚೆದೆಯ ಬ್ಯಾಟಿಂಗ್ ನಡೆಸಿದರು. ರೆಹಮತ್ ಶಾ ಏಕಾಂಗಿಯಾಗಿ 90 ರನ್ ಗಳಿಸಿದರೂ ಅಫ್ಘಾನಿಸ್ತಾನ ಕೊನೆಯಲ್ಲಿ 43.3 ಓವರ್ ಗಳಲ್ಲಿ ಕೇವಲ 208 ರನ್‌ಗಳಿಗೆ ಆಲೌಟ್ ಆಯಿತು. ದಕ್ಷಿಣ ಆಫ್ರಿಕಾ ಪರ ವೇಗಿ ಕಗಿಸೊ ರಬಾಡ ಗರಿಷ್ಠ 3 ವಿಕೆಟ್ ಪಡೆದರು.


Share It

You cannot copy content of this page