ಬೆಂಗಳೂರು: ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಇಂದು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿರುವ ಚಂಡಮಾರುತವು ಕರ್ನಾಟಕದ ಕೆಲವು ಭಾಗಗಳ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಲಾಗಿದೆ.
ನಿನ್ನೆ ಭಾನುವಾರ ಇಲ್ಲೆಲ್ಲಾ ಮಳೆ!
ಹೌದು, ಈ ಬಾರಿ ಬೇಸಿಗೆ ಬರುವ ಮುನ್ನವೇ ರಾಜ್ಯದ ಕೆಲವು ಊರುಗಳಲ್ಲಿ ಸಾಧಾರಣ ಮಳೆ ಸುರಿದಿದೆ.
ಭಾನುವಾರ ರಾಜ್ಯದಲ್ಲಿ ಗರಿಷ್ಠ ಮಳೆ ದಾಖಲಾದ ಸ್ಥಳಗಳ ಪೈಕಿ ಮೈಸೂರು ಒಂದು ಹೋಬಳಿ ಬಿಟ್ಟರೆ ಉಳಿದೆಲ್ಲವೂ ಉತ್ತರ ಕನ್ನಡ ಜಿಲ್ಲೆಯ ಹೋಬಳಿಗಳು. ಮೈಸೂರಿನ ಹಾರೋಹಳ್ಳಿಯಲ್ಲಿ 14 ಮಿ.ಮೀ ಮಳೆ ದಾಖಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಕುಮಟಾ, ಅಂಕೋಲಾ, ಬೇಲೇಕೇರಿ ತಾಲ್ಲೂಕುಗಳಲ್ಲಿ ಸಾಧಾರಣ ಮಳೆ ಸುರಿದಿದೆ.
ಹೊನ್ನಾವರ ತಾಲೂಕಿನ ನಗರಬಸ್ತಿಕೇರಿಯಲ್ಲಿ 12 ಮಿ.ಮೀ, ಅಂಕೋಲಾ ತಾಲೂಕಿನ ಮೊಗಟಾದಲ್ಲಿ 11 ಮಿ.ಮೀ., ಹಿಲ್ಲೂರಿನಲ್ಲಿ 10.50 ಮಿ.ಮೀ. ಮಳೆ ದಾಖಲಾಗಿದೆ. ಮೊನ್ನೆ ಶನಿವಾರವೂ ಕರಾವಳಿ ಭಾಗದಲ್ಲಿ ಅಲ್ಲಲ್ಲಿ ತುಂತುರು ಮಳೆಯಾಗಿದೆ. ಕುಮಟಾ ಸೇರಿ ಕೆಲವು ಕಡೆ ಮಾತ್ರ ಸ್ವಲ್ಪ ಸಮಯ ಉತ್ತಮ ಮಳೆಯಾಗಿದೆ. ಮಳೆ ಜೊತೆಗೆ ಗಾಳಿಯೂ ಜೋರಾಗಿ ಬೀಸಿದೆ. ಭಾನುವಾರ ಮಧ್ಯಾಹ್ನ ಜೋರಾಗಿ ಗಾಳಿ ಬೀಸಿ ಮಳೆಯಾಗಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ರಾತ್ರಿಯವರೆಗೆ ಮೋಡ ಕವಿದ ವಾತಾವರಣ ಮುಂದುವರೆದಿತ್ತು.
ಇಷ್ಟಾದರೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಣಹವೆ ಮುಂದುವರೆಯಲಿದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಒಣಹವೆ ಮುಂದುವರೆಯಲಿದೆ.
ಬೀದರ್ನಲ್ಲಿ 15.4 ಡಿಗ್ರಿ ಸೆಲ್ಸಿಯಸ್ ಅತ್ಯಂತ ಕನಿಷ್ಠ ಉಷ್ಣಾಂಶ, ಕಲಬುರಗಿಯಲ್ಲಿ 36.8 ಡಿಗ್ರಿ ಸೆಲ್ಸಿಯಸ್ ಅತ್ಯಂತ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಕಾರವಾರದಲ್ಲಿ ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಾಗಿತ್ತು. ಬಾಗಲಕೋಟೆ, ಬೆಂಗಳೂರು, ಹಾಸನ, ಚಿಂತಾಮಣಿಯಲ್ಲಿ ಕೂಡ ಸಾಮಾನ್ಯಕ್ಕಿಂತ ಹೆಚ್ಚಾಗಿತ್ತು.