ಬೆಂಗಳೂರು: ಕಂಡಕ್ಟರ್ ಮೇಲೆ ಹಲ್ಲೆ ಸೇರಿದಂತೆ ರಾಜ್ಯದ ಸಾರಿಗೆ ಬಸ್ ಗಳ ಮೇಲಿನ ಮರಾಠಿಗರ ಪುಂಡಾಟದ ಕುರಿತು ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ರಾಮಲಿಂಗ ರೆಡ್ಡಿ ಚರ್ಚೆ ನಡೆಸಲಿದ್ದಾರೆ.
ಸೋಮವಾರ ಬೆಳಗಾವಿ ಪ್ರವಾಸ ಮಾಡಿದ್ದ ಸಚಿವ ರಾಮಲಿಂಗ ರೆಡ್ಡಿ ಅವರು, ಹಲ್ಲೆಗೊಳಗಾದ ಕಂಡಕ್ಟರ್ ಮಹದೇವ ಅವರನ್ನು ಭೇಟಿ ಮಾಡಿ ಧೈರ್ಯ ತುಂಬಿದ್ದರು. ಅಲ್ಲಿನ ಅಧಿಕಾರಿಗಳ ಜತೆ ಸಭೆ ನಡೆಸಿ ಘಟನೆಯ ಮಾಹಿತಿ ಪಡೆದುಕೊಂಡಿದ್ದರು. ಈ ಕುರಿತು ಇಂದು ಬೆಳಗ್ಗೆ 10.30 ಕ್ಕೆ ಸಿಎಂ ಸಿದ್ದರಾಮಯ್ಯ ಅವರ ಕಾವೇರಿ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಲಿದ್ದಾರೆ.
ಸಚಿವರ ಬೆಳಗಾವಿ ಪ್ರವಾಸದ ವೇಳೆಯಲ್ಲಿಯೇ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ರಾಜ್ಯದ ಸಾರಿಗೆ ಬಸ್ ಗಳ ಮೇಲೆ ಮಸಿ ಬಳಿಯುವ ಪ್ರಯತ್ನಗಳು ನಡೆದಿವೆ. ಇದರಿಂದ ಸಾರಿಗೆ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ ಎಂಬ ಎಚ್ಚರಿಕೆಯನ್ನು ಸಚಿವ ರಾಮಲಿಂಗ ರೆಡ್ಡಿ ನೀಡಿದ್ದಾರೆ.
ಬೆಳಗಾವಿಯಿಂದ ಕೊಲ್ಲಾಪುರ ಕ್ಕೆ ತೆರಳುತ್ತಿದ್ದ ಸಾರಿಗೆ ಬಸ್ ಗಳ ಪ್ರಯಾಣವನ್ನು ನಿಲ್ಲಿಸಲಾಗಿದೆ. ಬೇರೆ ಜಿಲ್ಲೆಗಳಿಂದ ಮಹಾರಾಷ್ಟ್ರದ ವಿವಿಧ ನಗರಗಳಿಗೆ ಹೋಗುತ್ತಿದ್ದ ಬಸ್ ಗಳನ್ನು ತಡೆದು ಅಲ್ಲಲ್ಲಿ ಪುಂಡಾಟ ಮಾಡಲಾಗುತ್ತಿದೆ. ಇದೀಗ ಈ ಎಲ್ಲ ಅಂಶಗಳನ್ನು ಸಿಎಂ ಜತೆಗೆ ರಾಮಲಿಂಗ ರೆಡ್ಡಿ ಚರ್ಚೆ ಮಾಡಲಿದ್ದಾರೆ.
ಪ್ರಮುಖವಾಗಿ ಸಾರಿಗೆ ನೌಕರರ ಮೇಲೆ ಆಗುತ್ತಿರುವ ದೌರ್ಜನ್ಯ ಸಿಎಂ ಮುಂದೆ ಚರ್ಚೆಗೆ ಬರಲಿದೆ. ಅನೇಕ ಕಂಡಕ್ಟರ್ ಮತ್ತು ಡ್ರೈವರ್ ಗಳಿಗೆ ಮಸಿ ಬಳಿಯುವುದು, ಕೇಸರಿ ಬಣ್ಣ ಬಳಿಯುವುದನ್ನು ಮಾಡಿರುವ ಶಿವಸೇನೆ ಮತ್ತು ಎಂಇಎಸ್ ಪುಂಡರಿಗೆ ತಕ್ಕ ಪಾಠ ಕಲಿಸುವ ಕುರಿತು ಸಿಎಂ ಜತೆ ಚರ್ಚೆ ಮಾಡಲಿದ್ದಾರೆ.

