ಮರಾಠಿ ಪುಂಡರ ವಿರುದ್ಧ ಸಿಡಿದೆದ್ದ ಕನ್ನಡಿಗರು
- ಕುಂದಾನಗರಿಯಲ್ಲಿ ಶಕ್ತಿ ಪ್ರದರ್ಶನ-ನಮ್ಮ ತಂಟೆಗೆ ಬಂದರೆ ಸುಮ್ಮನಿರಲ್ಲೆಂದ ಕರವೇ ಕಾರ್ಯಕರ್ತರು
ಬೆಳಗಾವಿ: ತಾಲೂಕಿನ ಬಾಳೇಕುಂದ್ರಿಯಲ್ಲಿ ಬಸ್ ನಿರ್ವಾಹಕ ಮಹಾದೇವ ಹುಕ್ಕೇರಿ ಮೇಲಿನ ಹಲ್ಲೆ ಹಾಗೂ ಅವರ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಿದ್ದನ್ನು ಖಂಡಿಸಿ ನಗರದ ರಾಣಿ ಚನ್ನಮ್ಮನ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಟಿ.ಎ.ನಾರಾಯಣಗೌಡ, ಪ್ರವೀಣ ಶೆಟ್ಟಿ ಬಣಗಳ ಕಾರ್ಯಕರ್ತರು ಮಂಗಳವಾರ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಎಲ್ಲೆಡೆ ಕನ್ನಡದ ಬಾವುಟಗಳು ರಾರಾಜಿಸಿದವು. ಮುನ್ನೆಚ್ಚರಿಕೆ ಕ್ರಮವಾಗಿ ಬೆಳಗಾವಿ ನಗರದಾದ್ಯಂತ ಭಾರೀ ಪೊಲೀಸ್ ಭದ್ರತೆಯನ್ನು ಏರ್ಪಡಿಸಲಾಗಿತ್ತು. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಪ್ರತಿಭಟನಾನಿರತ ಕನ್ನಡಿಗರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು. ನಮ್ಮಲ್ಲಿ ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ಭಾಷೆ, ಗಡಿ, ನೆಲಜಲ ವಿಷಯ ಬಂದಾಗ ನಾವೆಲ್ಲರೂ ಒಂದೇ ಎಂಬ ಸಂದೇಶವನ್ನು ರವಾನೆ ಮಾಡಿದರು. ಅಲ್ಲದೇ ಬೆಳಗಾವಿಯಲ್ಲಿ ಕನ್ನಡಿಗನೇ ಸಾರ್ವಭೌಮ, ಕನ್ನಡ ಭಾಷೆಗೆ ಇಲ್ಲಿ ಮೊದಲ ಆದ್ಯತೆ. ಹೊರಗಡೆಯಿಂದ ಬಂದಿರುವ ಮರಾಠಿಗರು ಕನ್ನಡ ಕಲಿತು ಸೌಹಾರ್ದತೆಯಿಂದ ಬದುಕಬೇಕೆ ವಿನಃ ಮರಾಠಿ ಕಲಿಯುವಂತೆ ಕನ್ನಡಿಗರನ್ನು ಒತ್ತಾಯಿಸುವುದನ್ನು ಸಹಿಸುವುದಿಲ್ಲ, ಬೆಳಗಾವಿಯ ನೆಲ ವೀರ ಸಂಗೊಳ್ಳಿ ರಾಯಣ್ಣ, ವೀರ ರಾಣಿ ಕಿತ್ತೂರು ಚೆನ್ನಮ್ಮಳಂತಹ ಧೀರರಿಗೆ ಜನ್ಮಕೊಟ್ಟ ನಾಡು ಎಂಬುದನ್ನು ಮರಾಠಿಗರು ಮರೆಯಬಾರದು ಎಂದು ಪ್ರತಿಭಟನಾನಿರತರು ಗುಡುಗಿದರು.
ಈ ಸಂದರ್ಭದಲ್ಲಿಕರವೇ ಅಧ್ಯಕ್ಷ ಟಿಎ ನಾರಾಯಣಗೌಡ ಮಾತನಾಡಿ, ಕಂಡಕ್ಟರ್ ಮೇಲೆ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ, ರಾತ್ರೋರಾತ್ರಿ ಅದನ್ನು ಮಾಡಿದ್ದು ಯಾರು? ಕಾಣದ ಕೈಗಳು ಇಲ್ಲಿ ಕೆಲಸ ಮಾಡಿವೆ, ಕೇಸನ್ನು ದಾಖಲು ಮಾಡಿರುವ ಪೊಲೀಸ್ ಇನ್ಸ್ಪೆಕ್ಟರ್ ಮುಖಕ್ಕೆ ಎರಡು ಬಿಗಿಯಬೇಕು, ಅದ್ಹೇಗೆ ಅವನು ಪೋಕ್ಸೋ ಕೇಸನ್ನು ದಾಖಲಿಸುತ್ತಾನೆ? ಅವನೇನು ಕನ್ನಡಿಗನೋ ಅಥವಾ ಮಹಾರಾಷ್ಟ್ರದವನೋ? ಪೊಲೀಸ್ ಕಮೀಷನರ್ ಕೂಡಲೇ ಕಂಡಕ್ಟರ್ ಮೇಲೆ ಹಾಕಿರುವ ಕೇಸನ್ನು ವಾಪಸ್ಸು ಪಡೆಯಬೇಕು ಮತ್ತು ಗೃಹ ಸಚಿವರು ತಮ್ಮ ರಾಜಕೀಯ ದೊಂಬರಾಟವನ್ನು ಪಕ್ಕಕ್ಕಿಟ್ಟು ಬೆಳಗಾವಿ ಕನ್ನಡಿಗರ ಬಗ್ಗೆ ಯೋಚಿಸಬೇಕು ಎಂದು ಹೇಳಿದರು.
ನಾನು ಕಂಡಕ್ಟರ್ ಅವರನ್ನು ಭೇಟಿ ಮಾಡಿ ಬಂದಿದ್ದೇನೆ. ಅವರಿಗೆ ಇನ್ನೂ ತುಂಬಾ ಎದೆ ನೋವಿದೆ. ನೋವು ಕಡಿಮೆಯಾಗಿಲ್ಲ ಎಂದು ಕಣ್ಣೀರು ಹಾಕಿದರು. ಇಲ್ಲಿನ ಜಿಲ್ಲಾಡಳಿತ ಈ ಕೃತ್ಯ ಎಸಗಿದವರ ವಿರುದ್ಧ ಮುಲಾಜಿಲ್ಲದೇ ಗೂಂಡಾ ಕಾಯ್ದೆ ಹಾಕಬೇಕು. ಆರು ತಿಂಗಳು ಇಲ್ಲವೇ ಒಂದು ವರ್ಷ ಅವರನ್ನು ಜೈಲಿನಲ್ಲಿಡಬೇಕು. ಅದೇ ರೀತಿ ಅವರನ್ನು ಕರ್ನಾಟಕದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಒಬ್ಬ ಚಾಲಕ, ನಿರ್ವಾಹಕರನ್ನು ಬಸ್‌ನಿಂದ ಕೆಳಗಿಳಿಸಿ ಬಣ್ಣ ಹಾಕಿ, ಅವರಿಗೆ ಹಾರ ಹಾಕಿ ಜೈ ಮಹಾರಾಷ್ಟ್ರ ಅಂತಾ ಘೋಷಣೆ ಕೂಗಿಸುತ್ತೀರಿ. ಇಡೀ ಬೆಳಗಾವಿಯಲ್ಲಿರುವ ಪ್ರತಿಯೊಬ್ಬ ಮರಾಠಿಗನ ಬಾಯಿಯಿಂದಲೂ ಕರ್ನಾಟಕಕ್ಕೆ ಜೈ ಎನಿಸುವ ಕಾಲ ಬೇಗ ಬರುತ್ತದೆ. ಇದನ್ನೆಲ್ಲ ಬಿಟ್ಟು ಬಿಡಿ. ಬೆಳಗಾವಿಯಲ್ಲಿ ಎಂಇಎಸ್ ಸಂಪೂರ್ಣ ಅಂತ್ಯವಾಗಿದೆ. ಆ ಹೊಟ್ಟೆ ಉರಿಗೆ ಇಂಥ ಆಟ ಶುರು ಮಾಡಿದ್ದಾರೆ. ಬೆಳಗಾವಿ ಅಷ್ಟೇ ಅಲ್ಲದೇ ಇಡೀ ಕರ್ನಾಟಕದಲ್ಲಿ ಎಂಇಎಸ್ ಇಲ್ಲದಂತೆ ಮಾಡೋವರೆಗೂ ಕರವೇ ಹೋರಾಟ ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಯಾವುದೋ ರಾಜ್ಯದಿಂದ ಬಂದು ಇಲ್ಲಿ ಕೆಲಸ ಮಾಡುತ್ತಿರುವ ಜಿಲ್ಲಾಧಿಕಾರಿ ಇಲ್ಲಿಯ ಆಡಳಿತ ಭಾಷೆ ಕನ್ನಡ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಯಾವುದೋ ರಾಜ್ಯದಿಂದ ಬಂದು ಇಲ್ಲಿ ಕರ್ನಾಟಕದ ಬೆಳಗಾವಿ ಗಡಿ ವಿಚಾರ ಸುಪ್ರೀಂಕೋರ್ಟ್ ನಲ್ಲಿ ಇರುವಾಗ ಎಂಇಎಸ್‌ನವರು ಮರಾಠಿಯಲ್ಲಿ ದಾಖಲೆ ಕೊಟ್ಟರೆ ನಾಳೆ ಕರ್ನಾಟಕಕ್ಕೆ ಭಾರಿ ತೊಂದರೆ ಆಗುತ್ತದೆ. ನಿಮ್ಮ ಎಲ್ಲ ವ್ಯವಹಾರ, ಕಾಗದಪತ್ರಗಳನ್ನು ಕರ್ನಾಟಕದ ನೆಲದಲ್ಲಿ ನೀವು ಕನ್ನಡದಲ್ಲಿ ಕೊಡಬೇಕು. ಅವರು ಮರಾಠಿಯಲ್ಲಿ ಕೇಳುತ್ತಾರೆ. ಮತ್ತೊಬ್ಬರು ಮತ್ತೊಂದು ಭಾಷೆಯಲ್ಲಿ ಕೇಳುತ್ತಾರೆ ಎಂದರೆ ಜಿಲ್ಲಾಧಿಕಾರಿ ಕೊಡಬಾರದು ಎಂದು ಒತ್ತಾಯಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್ ಶೆಟ್ಟಿ ಮಾತನಾಡಿ, ಎಂಇಎಸ್ ಮತ್ತು ಶಿವಸೇನೆಯ ಗೂಂಡಾಗಳು ಹಲ್ಲೆ ನಡೆಸಿ ಪೋಕ್ಸೋ ಕೇಸ್ ಹಾಕಿದ್ದು ಕೇವಲ ಕಂಡಕ್ಟರ್ ಮೇಲೆ ಅಲ್ಲ, ಇಡೀ ಕರ್ನಾಟಕದ ಮೇಲೆ, ನಾವು ಕರ್ನಾಟಕದಲ್ಲಿದ್ದೀವೋ ಅಥವಾ ಬೇರೆ ರಾಜ್ಯದಲ್ಲಿದ್ದೀವೋ? ಮರಾಠೀ ಪುಂಡರು ಕನ್ನಡಿಗರ ಸ್ವಾಭಿಮಾನ ಹತ್ತಿಕ್ಕಲು ಬಿಡೋದಿಲ್ಲ, ಕಂಡಕ್ಟರ್ ವಿರುದ್ಧ ಹಾಕಿರುವ ಕೇಸನ್ನು ವಾಪಸ್ಸು ಪಡೆಯಬೇಕು ಮತ್ತ್ತು ಅದನ್ನು ಹಾಕಿದ ಇನ್ಸ್ಪೆಕ್ಟರ್ನನ್ನು ಸಸ್ಪೆಂಡ್ ಮಾಡಬೇಕೆಂದು ಹೇಳಿದರು. ಪ್ರತಿಭಟನೆಯಲ್ಲಿ ನೂರಾರು ಸಂಖ್ಯೆಯಲ್ಲಿ ಕರವೇ ಕಾರ್ಯಕರ್ತರು ಭಾಗವಹಿಸಿದ್ದರು.


