RTO ಕಚೇರಿಗಳು ಸಾರ್ವಜನಿಕ ಸ್ನೇಹಿಯಾಗಿರಬೇಕು: ರಾಮಲಿಂಗಾ ರೆಡ್ಡಿ ಖಡಕ್ ಸೂಚನೆ
ಬಾಗಲಕೋಟೆ: ಆರ್ಟಿಒ ಕಚೇರಿಗಳು ಸಾರ್ವಜನಿಕ ಸ್ನೇಹಿಯಾಗಿ ಕೆಲಸ ಮಾಡಬೇಕು ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡಿ ಅವರು ಖಡಕ್ ಸೂಚನೆ ನೀಡಿದದರು.
ಬೆಳಗಾವಿ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಕಚೇರಿಗೆ ಭೇಟಿ ನೀಡಿದ ನಂತರ ಮಾತನಾಡಿದ ಅವರು, ಅಧಿಕಾರಿಗಳಿಗೆ ಈ ರೀತಿ ಸೂಚನೆ ನೀಡಿದರು. ಬೆಳಗಾವಿ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಕಛೇರಿಯು ಬೆಳಗಾವಿ ಮತ್ತು ಖಾನಾಪೂರ ತಾಲ್ಲೂಕು ಒಳಗೊಂಡಿದೆ. ಆರ್ಟಿಒ ಹೊಸ ಕಛೇರಿಯ ಕಟ್ಟಡ ಕಾಮಗಾರಿಗೆ ಒಟ್ಟು ರೂ 9.74 ಕೋಟಿ ಮಂಜೂರಾಗಿದ್ದು, ಪ್ರಾದೇಶಿಕ ಸಾರಿಗೆ ಕಛೇರಿ ಮತ್ತು ಜಂಟಿ ಸಾರಿಗೆ ಆಯುಕ್ತರು, ಬೆಳಗಾವಿ ವಿಭಾಗದ ಕಚೇರಿ ಒಳಗೊಂಡಿರುತ್ತದೆ.ಈ ಕಟ್ಟಡದ ಪರಿವೀಕ್ಷಣೆ ನಡೆಸಿದ ಸಾರಿಗೆ ಸಚಿವರು ಏಪ್ರಿಲ್ 2025ಕ್ಕೆ ಹೊಸ ಕಟ್ಟಡದಲ್ಲಿ ಕರ್ತವ್ಯ ನಿರ್ವಹಿಸುವಂತೆ ಆಗಬೇಕು, ಅದರೊಳಗೆ ಕಾಮಗಾರಿ ಮುಕ್ತಾಯವಾಗಿರಬೇಕು ಎಂದು ಸೂಚನೆ ನೀಡಿದರು.
ಬೆಳಗಾವಿ ಆರ್ಟಿಒ 2024-25ನೇ ಸಾಲಿನ ರಾಜಸ್ವ ಗುರಿ ರೂ.23,260 ಲಕ್ಷ, ಅದರಲ್ಲಿ ರೂ.17625 ಲಕ್ಷ ವಸೂಲಾತಿ ಮಾಡಿ 90.92% ಪ್ರಗತಿ ಸಾಧಿಸಿದೆ. 5076 ವಾಹನಗಳ ಮೇಲೆ ಪ್ರಕರಣ ದಾಖಲಿಸಿ, ದಂಡ ಮೊತ್ತ ರೂ. 95,29,578/- ವಸೂಲು ಮಾಡಲಾಗಿರುತ್ತದೆ.
ರಸ್ತೆ ಸುರಕ್ಷತೆ ಗುರಿ: 6300 ವಾಹನಗಳ ಗುರಿಯನ್ನು ಹೊಂದಿದ್ದು, ಈವರೆಗೂ 5076 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿದ್ದು, ಶೇ.96.88 ರಷ್ಟು ಗುರಿಯನ್ನು ತಲುಪಿದೆ. ತೆರಿಗೆ ಬಾಕಿ ವಸೂಲಾತಿಗೆ ಮಾನ್ಯ ನ್ಯಾಯಾಲಯಗಳಲ್ಲಿ ದಾಖಲಿಸಿದ ಪ್ರಕರಣಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲು ಸೂಚಿಸಿದರು. ಡಿಸಿಬಿ ಮತ್ತು ಡಿಎ ಪ್ರಕರಣಗಳ ಬಗ್ಗೆ ಪರಾರ್ಮಶೆ ನಡೆಸಿದರು.
ಎಲ್ಲ ಹೊಸ ವಾಹನಗಳಿಗೆ ಹೆಚ್ಎಸ್ಆರ್ಪಿ ನೋಂದಣಿ ಕಡ್ಡಾಯಗೊಳಿಸಿದ್ದು, ನೋಂದಣಿಯಾದ 1,42,188 ವಾಹನಗಳಿಗೆ ಹೆಚ್.ಎಸ್.ಆರ್.ಪಿ ಅಳವಡಿಸಲಾಗಿದೆ. ವಿವಿಧ ಪ್ರಕರಣಗಳಲ್ಲಿ 988 ಚಾಲನಾ ಅನುಜ್ಞಾ ಪತ್ರಗಳನ್ನು ವಶಪಡಿಸಿಕೊಂಡು ಅವುಗಳನ್ನು ಅಮಾನತ್ತುಗೊಳಿಸಲಾಗಿದೆ. ಒಟ್ಟು 7,26,380 ವಾಹನಗಳ ನೋಂದಣಿಯಾಗಿರುತ್ತವೆ. 54,574 ನೋಂದಣಿ ಕಾರ್ಡ ಹಾಗೂ 50,824 ಚಾಲನಾ ಅನುಜ್ಞಾ ಪತ್ರಗಳನ್ನು ಅಂಚೆ ಮೂಲಕ ರವಾನಿಸಲಾಗಿದೆ.
ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ, ಬಾಗಲಕೋಟೆ ಕಛೇರಿಯು ಬಾಗಲಕೋಟೆ, ಬೀಳಗಿ, ಗುಳೇದಗುಡ್ಡ, ಬದಾಮಿ, ಹುನಗುಂದ ಮತ್ತು ಇಲಕಲ್ ಒಳಗೊಂಡಿದ್ದು, ರೂ. 8675.00 ಲಕ್ಷ ರಾಜಸ್ವ ಗುರಿಯಲ್ಲಿ ರೂ 6647.25 ಸಂಗ್ರಹಿಸಿ ಶೇ.92.04 ರಷ್ಟು ಗುರಿ ಸಾಧಿಸಿದೆ. 2344 ವಾಹನಗಳ ಮೇಲೆ ಪ್ರಕರಣ ದಾಖಲಿಸಿ, ದಂಡ ರೂ. 1,76,74,951/- ವಸೂಲು ಮಾಡಲಾಗಿರುತ್ತದೆ.
ರಸ್ತೆ ಸುರಕ್ಷತೆ: 3074 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿದ್ದು, ಶೇ.79.12 ರಷ್ಟು ಗುರಿಯನ್ನು ತಲುಪಿದೆ. ಸ್ವಯಂ ಚಾಲನಾ ಪರೀಕ್ಷಾ ಪಥದ ಕಾಮಗಾರಿಯನ್ನು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯವರಿಗೆ ವಹಿಸಲಾಗಿದ್ದು, ಚಾಲನಾ ಪಥಗಳ ನಿರ್ಮಾಣ ಕಾರ್ಯ ಮುಕ್ತಾಯಗೊಂಡಿದ್ದು,ಯೋಜನೆಯ ಮೊತ್ತ ರೂ. 9 ಕೋಟಿಯಾಗಿದ್ದು ಏಪ್ರಿಲ್ 2025 ರವರೆಗೆ ಪೂರ್ಣಗೊಳಿಸಲು ಮಾನ್ಯ ಸಾರಿಗೆ ಸಚಿವರು ಸೂಚನೆ ನೀಡಿರುತ್ತಾರೆ.
3,05,224 ವಾಹನಗಳ ನೋಂದಣಿಯಾಗಿದ್ದು, 1,55,200 ಚಾಲನಾ ಅನುಜ್ಞಾ ಪತ್ರಗಳನ್ನು ನೀಡಲಾಗಿದೆ. 3,09,276 ಕಲಿಕಾ ಚಾಲನಾ ಅನುಜ್ಞಾ ಪತ್ರಗಳನ್ನು ನೀಡಲಾಗಿದೆ. ಕಛೇರಿಗಳು ಸಾರ್ವಜನಿಕರಿಗೆ ಅಗತ್ಯವಾದ ಸೇವೆಗಳನ್ನು ನಿಗದಿತ ಕಾಲ ಮಿತಿಯಲ್ಲಿ ಒದಗಿಸಿ ಸಾರ್ವಜನಿಕ ಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು. ರಾಜಸ್ವ ಸಂಗ್ರಹ , ಎಚ್.ಎಸ್ ಆರ್.ಪಿ ನೋಂದಣಿ ಸಾಧನೆಯ ಪ್ರಮಾಣ ಹೆಚ್ಚಾಗಬೇಕು. ಯಾವುದೇ ರೀತಿಯ ವಿಳಂಬ ಧೋರಣೆಗೆ ಅವಕಾಶ ಮಾಡಿಕೊಡಬಾರದೆಂದು ಸೂಚಿಸಿದರು.


