ಅಪರಾಧ ಸಿನಿಮಾ ಸುದ್ದಿ

ದೆಹಲಿ, ಮುಂಬಯಿಗೆ ತೆರಳಲು ಪವಿತ್ರಾಗೌಡಗೆ ಕೋರ್ಟ್ ಅನುಮತಿ

Share It

ಬೆಂಗಳೂರು: ನಟ ದರ್ಶನ್ ತೂಗುದೀಪ್ ಸ್ನೇಹಿತೆ ನಟಿ ಪವಿತ್ರಾಗೌಡ ಅವರಿಗೆ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ-1 ಆರೋಪಿಯಾಗಿ ಕಳೆದ ವರ್ಷ ಜೈಲಿನ‌ ಕಂಬಿ ಎಣಿಸಬೇಕಾಗಿತ್ತು. ಪರಪ್ಪನ ಅಗ್ರಹಾರದಲ್ಲಿ ಪವಿತ್ರಾಗೌಡ ಎ-1 ಮಹಿಳಾ ಖೈದಿಯಾಗಿ ಜೈಲಿನಲ್ಲಿದ್ದರು.

ಆದರೆ ಈಗ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಹಾಗಂತ ಪವಿತ್ರಾಗೌಡ ಮನಸ್ಸಿಗೆ ಬಂದ ಕಡೆಗೆಲ್ಲ ಹೋಗುವಂತಿಲ್ಲ. ಎಲ್ಲಿಗೆ ಹೋಗಬೇಕಾದರೂ ನ್ಯಾಯಾಲಯದ ಅನುಮತಿ ಬೇಕು. ಆದರೆ ಇಂದು ಪವಿತ್ರಾಗೌಡ ಅವರು ದೆಹಲಿ ಮತ್ತು ಮುಂಬೈಗೆ ಪ್ರಯಾಣ ಬೆಳೆಸಲು ಕೋರ್ಟ್ ಅನುಮತಿ ಪಡೆದಿದ್ದಾರೆ.

ದೆಹಲಿ, ಮುಂಬಯಿಗೆ ಪ್ರಯಾಣಿಸಲು ಪವಿತ್ರಾಗೌಡ ಅವರಿಗೆ ಇಂದು ಕೋರ್ಟ್​ ಅನುಮತಿ ನೀಡಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾಗೌಡ ಎ1 ಆಗಿದ್ದಾರೆ, ಅವರ ಪರವಾಗಿ ವಕೀಲ ರವೀಂದ್ರಗೌಡ ಅವರು ಅರ್ಜಿ ಸಲ್ಲಿಸಿದ್ದರು. ಮಾರ್ಚ್​ 3ರಿಂದ ಮಾರ್ಚ್​ 10ರ ತನಕ ದೆಹಲಿ ಮತ್ತು ಮಾರ್ಚ್​ 17ರಿಂದ 26ರವರೆಗೆ ಮುಂಬಯಿಗೆ ತೆರಳಲು ಅನುಮತಿ ನೀಡಲಾಗಿದೆ.

ಪವಿತ್ರಾಗೌಡ ಅವರು ತಮ್ಮ ಅಂಗಡಿಗೆ ಬಟ್ಟೆ ತರಲು ಪ್ರಯಾಣ ಮಾಡಲು ಅನುಮತಿ ಕೋರಿದ್ದರು. ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ ಜಡ್ಜ್ ಜೈಶಂಕರ್ ಅವರು ಪವಿತ್ರಾಗೌಡ ದೆಹಲಿ, ಮುಂಬಯಿಗೆ ತೆರಳಲು ಅನುಮತಿ ನೀಡಿ ಆದೇಶಿಸಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ದರ್ಶನ್, ಪವಿತ್ರಾಗೌಡ ಹಾಗೂ ಇನ್ನೂ ಹಲವಾರು ಆರೋಪಿಗಳು ಇಂದು (ಫೆಬ್ರವರಿ 25) ನ್ಯಾಯಾಲಯದಲ್ಲಿ ಹಾಜರಾಗಿದ್ದರು. ಹಿಂದೆ ದರ್ಶನ್ ಮತ್ತು ಪವಿತ್ರಾಗೌಡ ಅವರ ನಡುವೆ ತುಂಬಾ ಆಪ್ತತೆ ಇತ್ತು. ಆದರೆ ಈಗ ಅಂತಹ ಆಪ್ತತೆ, ಸಲುಗೆ ಇಲ್ಲದಂತಾಗಿದೆ.

ರೇಣುಕಾಸ್ವಾಮಿ ಕೊಲೆ ಕೇಸ್ ಸಂಬಂಧಿಸಿದಂತೆ ದರ್ಶನ್ ಅರೆಸ್ಟ್ ಆದ ಬಳಿಕ ಪವಿತ್ರಾಗೌಡ ಜೊತೆಗಿನ ಸಂಪರ್ಕ ಕಡಿತವಾಯಿತು. ಇಂದು (ಫೆ.25) ಕೋರ್ಟ್ ಎದುರು ಪವಿತ್ರಾಗೌಡ ಹಾಗೂ ದರ್ಶನ್ ಮುಖಾಮುಖಿಯಾದರು. ಹಾಗಿದ್ದರೂ ಕೂಡ ಅವರಿಬ್ಬರೂ ಪರಸ್ಪರ ಮಾತನಾಡಲಿಲ್ಲ!

ಜಾಮೀನು ಸಿಕ್ಕ ನಂತರ ಪವಿತ್ರಾಗೌಡ ಅವರು ತಮ್ಮ ವೈಯಕ್ತಿಕ ಬದುಕಿನ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಬಿಸಿನೆಸ್​ ಕಡೆಗೆ ಅವರ ಆಸಕ್ತಿ ಮೂಡಿದೆ. ಕೆಲವೇ ದಿನಗಳ ಹಿಂದೆ ಪವಿತ್ರಾಗೌಡ ಅವರು ತಮ್ಮ ರೆಡ್​ ಕಾರ್ಪೆಟ್​ ಸ್ಟುಡಿಯೋ ರೀ-ಲಾಂಚ್ ಮಾಡಿದರು. ಆ ಸಂದರ್ಭದ ಫೋಟೋಗಳನ್ನು ಅವರು ಹಂಚಿಕೊಂಡಿದ್ದರು.


Share It

You cannot copy content of this page