ತುಮಕೂರು: ವಾಟಾಳ್ ನಾಗರಾಜ್ ಮಾರ್ಚ್ 22 ರಂದು ಕರೆದಿರುವ ಕರ್ನಾಟಕ ಬಂದ್ಗೆ ತಮ್ಮ ಬೆಂಬಲ ಇಲ್ಲವೆಂದು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎ ನಾರಾಯಣಗೌಡ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದ ಅವರು, ಕೆಪಿಎಸ್ಸಿ ನಡೆಸುವ ಕೆಎಎಸ್ ಪರೀಕ್ಷೆ ಬರೆದು ಹೋರಾಟ ನಡೆಸುತ್ತಿರುವ ಸುಮಾರು 76,000 ಜನರ ಜೊತೆ ಒಂದು ತಿಂಗಳಿಂದ ಇದ್ದೇನೆ, ಮಾರ್ಚ್ನಲ್ಲಿ ಪರೀಕ್ಷೆಗಳು ನಡೆಯುವ ಕಾರಣ ಬಂದ್ ಆಚರಿಸಿದರೆ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತದೆ, ಅವರು ವರ್ಷವಿಡೀ ಓದಿ ತಯಾರಿ ಮಾಡಿಕೊಂಡಿರುತ್ತಾರೆ, ಅವರು ಪರೀಕ್ಷೆಗೆ ಹೋಗದಂಥ ಸನ್ನಿವೇಶ ಸೃಷ್ಟಿಯಾದರೆ ಹೇಗೆ? ಎಂದು ಕರವೇ ಅಧ್ಯಕ್ಷ ಟಿ.ಎ ನಾರಾಯಣಗೌಡ ಹೇಳಿ ಮಾರ್ಚ್ 22 ರಂದು ವಾಟಾಳ್ ನಾಗರಾಜ್ ಅವರು ಘೋಷಿಸಿರುವ ಕರ್ನಾಟಕ ಬಂದ್ ಕರೆಗೆ ತಮ್ಮ ಬೆಂಬಲ ಇಲ್ಲವೆಂದು ಹೇಳಿದ್ದಾರೆ.
ಈ ಮೂಲಕ ಕನ್ನಡ ಪರ ಸಂಘಟನೆಗಳ ಪರವಾಗಿ ಕನ್ನಡ ಚಳುವಳಿಯ ಹೋರಾಟಗಾರ, ಮಾಜಿ ಶಾಸಕ ವಾಟಾಳ್ ನಾಗರಾಜ್ ಅವರು ಬೆಳಗಾವಿ ಜಿಲ್ಲೆಯ ಗಡಿ ಭಾಗಗಳಲ್ಲಿ ಮರಾಠಿ ಭಾಷೆಯ ಅಟ್ಟಹಾಸದ ವಿರುದ್ಧ ನಡೆಸಲು ಉದ್ದೇಶಿಸಿರುವ ಮಾರ್ಚ್ 22 ರ ಕರ್ನಾಟಕ ಬಂದ್ ಕರೆಗೆ ಹಿನ್ನಡೆ ಉಂಟಾಗಿದೆ. ಜೊತೆಗೆ ಕನ್ನಡ ಪರ ಹೋರಾಟಗಳಲ್ಲಿ ಒಗ್ಗಟ್ಟಿಲ್ಲ, ಒಡಕಿದೆ ಎಂಬುದು ಟಿ.ಎ ನಾರಾಯಣಗೌಡ ಬಣದ ಕರವೇ ಪ್ರತ್ಯೇಕ ನಿರ್ಧಾರ ಇಡೀ ಕನ್ನಡ ಪರ ಹೋರಾಟಕ್ಕೆ ಭಾರೀ ಹಿನ್ನಡೆ ತಂದಿದೆ ಎಂದು ಸ್ಪಷ್ಟವಾಗಿ ವಿಶ್ಲೇಷಿಸಬಹುದು.