ಬೆಂಗಳೂರು: ಕಳೆದ 2023 ರ ವಿಧಾನಸಭಾ ಚುನಾವಣೆಯಲ್ಲಿ ಜಯನಗರ ಬಿಜೆಪಿ ಅಭ್ಯರ್ಥಿಯಾಗಿದ್ದ ಹಾಲಿ ಶಾಸಕ ಸಿ.ಕೆ ರಾಮಮೂರ್ತಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಪರಾಜಯಗೊಂಡಿದ್ದ ಸೌಮ್ಯ ರೆಡ್ಡಿ ಅವರು ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯಲ್ಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಿ.ಕೆ. ರಾಮಮೂರ್ತಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ಸೋಮವಾರ ವಜಾ ಮಾಡಿದೆ.
ಈ ಮೂಲಕ ಕರ್ನಾಟಕ ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಕ್ಕೆ ಸುಪ್ರೀಂಕೋರ್ಟ್ ನಕಾರ ಎಂದಿದೆ.
ಜಯನಗರ ಬಿಜೆಪಿ ಶಾಸಕ ಸಿ.ಕೆ ರಾಮಮೂರ್ತಿ ವಿರುದ್ಧ ಸೌಮ್ಯ ರೆಡ್ಡಿ ಚುನಾವಣಾ ತಕರಾರು ವಿಚಾರವಾಗಿ ಆಯ್ಕೆ ಅಸಿಂಧು ಕೋರಿ ಬೆಂಗಳೂರಿನ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಡಿವಿಡಿ ಸೇರಿ 10 ದಾಖಲೆ ಹಾಜರುಪಡಿಸಲು ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಸೌಮ್ಯಾರೆಡ್ಡಿಗೆ ಕಳೆದ ಫೆಬ್ರವರಿ 14ರಂದು ಹೈಕೋರ್ಟ್ ಅನುಮತಿ ನೀಡಿತ್ತು.
ಇತ್ತ ಹೈಕೋರ್ಟ್ ಆದೇಶ ಪ್ರಶ್ನಿಸಿ ಶಾಸಕ ಸಿ.ಕೆ.ರಾಮಮೂರ್ತಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಇಂದು ಈ ಮೇಲ್ಮನವಿ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್ ಪೀಠದಲ್ಲಿ ನಡೆಯಿತು. ವಿಚಾರಣೆ ಬಳಿಕ ಹೈಕೋರ್ಟ್ ಆದೇಶ ಪ್ರಶ್ನಿಸಿದ್ದ ಸಿ.ಕೆ.ರಾಮಮೂರ್ತಿ ಅರ್ಜಿವನ್ನು ವಜಾ ಮಾಡಿದ ಸುಪ್ರೀಂಕೋರ್ಟ್, ಸೌಮ್ಯಾ ರೆಡ್ಡಿ ಸಲ್ಲಿಸಿರುವ ದಾಖಲೆಗೆ 3 ವಾರಗಳಲ್ಲಿ ಲಿಖಿತ ಹೇಳಿಕೆ ಸಲ್ಲಿಸಲು ಅವಕಾಶ ನೀಡಿದೆ.
ಕಳೆದ 2023 ರ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನ ಜಯನಗರ ವಿಧಾನಸಭಾ ಚುನಾವಣೆಯಲ್ಲಿ ಕೇವಲ 16 ಮತಗಳಿಂದ ಸೋಲು ಕಂಡಿದ್ದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಅವರು ತಮ್ಮ ವಿರುದ್ಧ ಜಯಿಸಿದ್ದ ಬಿಜೆಪಿ ಅಭ್ಯರ್ಥಿ ಸಿ.ಕೆ.ರಾಮಮೂರ್ತಿ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದರು.
ಮತಯಂತ್ರದ ಮತಗಳ ಎಣಿಕೆಯಲ್ಲಿ ತಾನು ಮುನ್ನಡೆ ಸಾಧಿಸಿದ್ದೆ, ಆದರೆ ಅಂಚೆ ಮತಪತ್ರಗಳ ಎಣಿಕೆಯಲ್ಲಿ ವ್ಯತ್ಯಾಸವಾಗಿದೆ. 827 ಮತಗಳನ್ನು ಪ್ರತಿ ಬಾರಿ ಮರುಎಣಿಕೆ ಮಾಡಿದಾಗಲೂ ಪ್ರತ್ಯೇಕ ಅಂಕಿ-ಅಂಶ ಬಂದಿದೆ. ಮತ ಎಣಿಕೆ ಆರಂಭವಾದ ನಂತರವೂ ಪೋಸ್ಟ್ ಮೂಲಕ ಬಂದಿದ್ದ ಮತಪತ್ರಗಳನ್ನು ಎಣಿಕೆಗೆ ಪರಿಗಣಿಸಲಾಗಿದೆ ಎಂದೆಲ್ಲಾ ಸೌಮ್ಯರೆಡ್ಡಿ ಅರ್ಜಿಯಲ್ಲಿ ಆರೋಪಿಸಿದ್ದರು. ಇದರಿಂದ ಜಯನಗರ ಕ್ಷೇತ್ರದ ಬಿಜೆಪಿಯ ವಿಜೇತ ಅಭ್ಯರ್ಥಿ ಸಿ.ಕೆ.ರಾಮಮೂರ್ತಿ ಆಯ್ಕೆ ಅಸಿಂಧುಗೊಳಿಸಬೇಕೆಂದು ಚುನಾವಣಾ ತಕರಾರು ಅರ್ಜಿಯಲ್ಲಿ ಸೌಮ್ಯ ರೆಡ್ಡಿ ಮನವಿ ಮಾಡಿದ್ದರು.