ಬೆಂಗಳೂರು/ಮೈಸೂರು : ಪ್ಲಾಸ್ಟಿಕ್ ಬಳಸಿ ಹೋಳಿಗೆ ತಯಾರಿಸಿ ಮಾರಾಟ ಮಾಡುತ್ತಿದ್ದ ಹೋಟೆಲುಗಳ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ಬೆಂಗಳೂರು ಮತ್ತು ಮೈಸೂರು ಮಹಾನಗರಗಳಲ್ಲಿ ಇಂದು ಏಕಕಾಲದಲ್ಲಿ ದಿಢೀರ್ ದಾಳಿ ನಡೆಸಿದ್ದಾರೆ.
ಮೈಸೂರಿನ 2 ಹೋಳಿಗೆ ಅಂಗಡಿಗಳ ಮೇಲೆ ದಿಢೀರ್ ದಾಳಿ ನಡೆಸಿದ ಆಹಾರ ಇಲಾಖೆ ಅಧಿಕಾರಿಗಳು ಅಲ್ಲಿ ಕಾನೂನು ಬಾಹಿರವಾಗಿ ನಿಷೇಧಿಸಲಾದ ಪ್ಲಾಸ್ಟಿಕ್ ಬಳಸಿಕೊಂಡು ಹೋಳಿಗೆ ತಯಾರಿಸುತ್ತಿದ್ದನ್ನು ಕಂಡಿದ್ದಾರೆ. ಕೂಡಲೇ ಮೈಸೂರಿನ ಈ 2 ಹೋಳಿಗೆ ಅಂಗಡಿಗಳಿಗೆ ನೋಟಿಸ್ ನೀಡಿ ಆಹಾರ ಇಲಾಖೆ ಅಧಿಕಾರಿಗಳು ತಪಾಸಣೆ ಮುಂದುವರೆಸಿದ್ದಾರೆ.
ಇತ್ತ ರಾಜಧಾನಿ ಬೆಂಗಳೂರಿನಲ್ಲೂ ಹೋಳಿಗೆ ಅಂಗಡಿಗಳ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ಹೋಳಿಗೆ ಅಂಗಡಿಗಳ ಮೇಲೆ ದಿಢೀರ್ ದಾಳಿ ನಡೆಸಿ ಪ್ಲಾಸ್ಟಿಕ್ ಬಳಸಿ ಹೋಳಿಗೆ ತಯಾರಿಸುತ್ತಿದ್ದ ದೃಶ್ಯ ಕಂಡಿದ್ದಾರೆ.
ಹೋಟೆಲ್‌ಗಳಲ್ಲಿ ಇಡ್ಲಿ ಬೇಯಿಸಲು ಪ್ಲಾಸ್ಟಿಕ್ ಹಾಳೆಗಳನ್ನು ಬಳಸಲಾಗುತ್ತಿದ್ದು, ಈ ಪ್ಲಾಸ್ಟಿಕ್ ಹಾಳೆಯಿಂದ ಹಾನಿಕಾರಕ ರಾಸಾಯನಿಕಗಳು ಆಹಾರಕ್ಕೆ ಸೇರುತ್ತವೆ. ಹೀಗಾಗಿ, ಪ್ಲಾಸ್ಟಿಕ್ ಹಾಳೆ ಬಳಸುವುದನ್ನು ನಿಷೇಧಿಸಲಾಗಿದೆ. ಅದರಂತೆ ಇದೀಗ ಹೋಟೆಲ್‌ಗಳಲ್ಲಿ ರೆಡಿಮೆಡ್ ಹೋಳಿಗೆ ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿದ್ದು, ಈ ಸಂಬಂಧ ಇಂದು (ಮಾರ್ಚ್ 3) ಬೆಂಗಳೂರಿನ ಕೆಲ ಅಂಗಡಿಗಳ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ನೋಟಿಸ್ ನೀಡಿದ್ದಾರೆ.
ಹೋಳಿಗೆಯನ್ನ ತಯಾರಿಸಲು ಸಿಂಗಲ್ ಯೂಸ್ ಪ್ಲಾಸ್ಟಿಕ್ ಬಳಕೆ ಮಾಡುತ್ತಾರೆ. ಈ ಹಿನ್ನೆಲೆ ಹೋಳಿಗೆ ಅಂಗಡಿಗಳ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದು, ಪ್ಲಾಸ್ಟಿಕ್ ಬಳಕೆ ಮಾಡಿರುವ ಅಂಗಡಿಗಳಿಗೆ ನೋಟಿಸ್ ನೀಡಿದ್ದಾರೆ. ಹೋಳಿಗೆಗೆ ಪ್ಲಾಸ್ಟಿಕ್ ಕವರ್ ಬಳಸಿದ್ರೆ ವಿಷಕಾರಿ ಅಂಶ ಹೋಳಿಗೆ ಸೇರುವ ಸಾಧ್ಯತೆ ಇದೆ. ಇದರಿಂದ ಹೋಳಿಗೆಗೆ ಪ್ಲಾಸ್ಟಿಕ್ ಬಳಸಬಾರದು ಎಂದು ಸೂಚಿಸಲಾಗಿದೆ. ಈಗಾಗಲೇ ಆಹಾರ ಪದಾರ್ಥಗಳ ತಯಾರಿಕೆಗೆ ಪ್ಲಾಸ್ಟಿಕ್ ಬಳಕೆ ಮಾಡಬಾರದು ಎಂದು ಆಹಾರ ಇಲಾಖೆಯಿಂದ ಸೂಚನೆ ನೀಡಲಾಗಿದೆ.
ಇನ್ನೇನು ಯುಗಾದಿ ಹಬ್ಬ ಬರುತ್ತಿರುವುದರಿಂದ ರಾಜ್ಯಾದ್ಯಂತ ಎಲ್ಲೆಡೆ ಹೋಟೆಲ್-ಅಂಗಡಿಗಳಲ್ಲಿ ರೆಡಿಮೆಡ್ ಹೋಳಿಗೆಗಳ ಘಮ ಘಮ ಜೋರಾಗುತ್ತೆ. ಆದರೆ ಹೀಗೆ ಬಿಸಿ ಬಿಸಿ ಹೋಳಿಗೆ ಮಾಡಿ ಅದನ್ನು ಒಂದು ಪ್ಲಾಸ್ಟಿಕ್ ನಿಂದ ಕವರ್ ಮಾಡಿ ಇಡುತ್ತಾರೆ. ಇಂತಹ ಹೋಳಿಗೆ ತಿನ್ನುವ ಮುನ್ನ ಸಾರ್ವಜನಿಕರು ಈ ಪ್ಲಾಸ್ಟಿಕ್ ಬಳಸಿ ತಯಾರಿಸಿದ ಹೋಳಿಗೆ ಬಗ್ಗೆ ಎಚ್ಚರ ವಹಿಸುವುದು ಒಳಿತು. ಯುಗಾದಿ ಹಬ್ಬಕ್ಕಾಗಿ ಪೂರಣ್ ಪೋಳಿ ಎಂದೂ ಕರೆಯಲ್ಪಡುವ ಬೇಳೆ ಹೋಳಿಗೆಯು ಹಬ್ಬಕ್ಕಾಗಿಯೇ ತಯಾರಿಸಲಾದ ಆಕರ್ಷಕವಾದ ಸಿಹಿ ತಿಂಡಿಯಾಗಿದೆ. ಇದನ್ನು ಯುಗಾದಿಯಂದು ವಿಶೇಷವಾಗಿ ತಯಾರಿಸಲಾಗುತ್ತದೆ ಮತ್ತು ಇದು ದಕ್ಷಿಣ ಭಾರತದ ಜನಪ್ರಿಯವಾಗಿದೆ.
ಬಿಸಿ ಬಿಸಿ ಹೋಳಿಗೆ ಮೇಲೆ ಪ್ಲಾಸ್ಟಿಕ್ ಇಟ್ಟಿರುವುದರಿಂದ ಆ ಪ್ಲಾಸ್ಟಿಕ್ ಹಾಳೆಯ ವಿಷಕಾರಿ ಅಂಶ ಹೋಳಿಗೆಗೆ ಸೇರಿಕೊಳ್ಳುತ್ತೆ. ಒಂದು ವೇಳೆ ಅದನ್ನು ಸೇವಿಸಿದರೆ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಗ್ಯಾರಂಟಿ. ಹೀಗಾಗಿ ಈ ಬಗ್ಗೆ ಎಚ್ಚರದಿಂದ ಇರಬೇಕು. ಕೇವಲ ಹೋಳಿಗೆ ಮಾತ್ರವಲ್ಲ, ಪ್ಲಾಸ್ಟಿಕ್ ಸಹಾಯದಿಂದ ಯಾವೆಲ್ಲಾ ಬಿಸಿ ಬಿಸಿ ಆಹಾರ ತಯಾರು ಮಾಡುತ್ತಾರೋ? ಅದನ್ನು ಸೇವಿಸುವ ಮುನ್ನ ಯೋಚಿಸಬೇಕು. ಯಾಕಂದ್ರೆ ಪ್ಲಾಸ್ಟಿಕ್ ಬಳಸಿ ಆಹಾರ ತಯಾರಿಸಿದ ಪದಾರ್ಥಗಳನ್ನು ಸೇವಿಸಿದರೆ ಬಹಳ ಅಪಾಯಕಾರಿ ಎಂದು ಖುದ್ದು ಆಹಾರ ಇಲಾಖೆಯೇ ಎಚ್ಚರಿಕೆ ನೀಡಿ ರಾಜ್ಯಾದ್ಯಂತ ಅಲರ್ಟ್ ಘೋಷಿಸಿದೆ.