ಅಪರಾಧ ಸುದ್ದಿ

ಪ್ರೇಯಸಿ ಕೊಂದು, ಆತ್ಮಹತ್ಯೆ ಮಾಡಿಕೊಂಡ ಯುವಕ

Share It

ಬೆಳಗಾವಿ: ಮದುವೆಗೆ ಒಪ್ಪದ ಪ್ರಿಯತಮೆಗೆ ಚೂರಿ ಇರಿದು ಕೊಲೆ ಮಾಡಿದ ಯುವಕ, ಅದೇ ಚೂರಿಯಿಂದ ತಾನೂ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಶಹಾಪುರದ ನವಿ ಗಲ್ಲಿ ಮನೆಯಲ್ಲಿ ಮಂಗಳವಾರ ನಡೆದಿದೆ.

ಶಹಾಪುರದ ನಾಥ ಪೈ ವೃತ್ತದ ನಿವಾಸಿ ಐಶ್ವರ್ಯಾ ಮಹೇಶ ಲೋಹಾರ (18) ಕೊಲೆಯಾದವರು. ಯಳ್ಳೂರ ಗ್ರಾಮದ ಪ್ರಶಾಂತ ಯಲ್ಲಪ್ಪ ಕುಂಡೇಕರ (29) ಆತ್ಮಹತ್ಯೆ ಮಾಡಿಕೊಂಡವರು.

ಐಶ್ವರ್ಯಾ ಮತ್ತು ಪ್ರಶಾಂತ ಇಬ್ಬರೂ ಒಂದೂವರೆ ವರ್ಷಗಳಿಂದ ಪ್ರೀತಿಸುತ್ತಿದ್ದರು. ಶಿಕ್ಷಣ ಮುಗಿಸಿದ ಬಳಿಕ ಪ್ರಶಾಂತ ಬೆಳಗಾವಿಯಲ್ಲಿ ಪೇಂಟ‌ರ್ ಆಗಿದ್ದರು. ಮದುವೆಗೆ ಯುವತಿಯ ತಾಯಿ ವಿರೋಧವಿತ್ತು. ಯುವತಿ ಇನ್ನೂ ಚಿಕ್ಕವಳಿದ್ದು, ಉತ್ತಮ ಭವಿಷ್ಯವಿದೆ. ನೀನು ಹೆಚ್ಚು ಗಳಿಸಿ ನಿನ್ನ ಕಾಲ ಮೇಲೆ ನಿಂತುಕೊಳ್ಳು. ಆಮೇಲೆ ನೋಡೋಣ ಎಂದಿದ್ದರು. ಇದೇ ವಿಚಾರವಾಗಿ ಯುವಕ- ಯುವತಿ ಮಧ್ಯೆ ತಂಟೆಯಾಗಿತ್ತು’ ಎಂದು ನಗರ ಪೊಲೀಸ್‌ ಕಮಿಷನರ್‌ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ತಿಳಿಸಿದ್ದಾರೆ.

ಮಂಗಳವಾರ ಐಶ್ವರ್ಯ ಅವರು ತಮ್ಮ ಚಿಕ್ಕಮ್ಮನ ಮನೆಗೆ ಯುವಕನನ್ನು ಕರೆಸಿಕೊಂಡು ಮಾತನಾಡಲು ಯತ್ನಿಸಿದರು. ಇಬ್ಬರ ನಡುವೆ ವಾಗ್ವಾದ ನಡೆಯಿತು. ಸಂಜೆ 5.30ರ ಸುಮಾರಿಗೆ ಪ್ರಶಾಂತ ಚೂರಿಯಿಂದ ಐಶ್ವರ್ಯ ಕುತ್ತಿಗೆ ಭಾಗಕ್ಕೆ ಚಿಚ್ಚಿದ, ತಕ್ಷಣವೇ ತನ್ನ ಕುತ್ತಿಗೆಗೆ ಚುಚ್ಚಿಕೊಂಡ. ರಕ್ತದ ಮಡುವಿನಲ್ಲಿ ಬಿದ್ದ ಇಬ್ಬರೂ ಕೆಲವೇ ನಿಮಿಷಗಳಲ್ಲಿ ಸಾವನ್ನಪ್ಪಿದರು’ ಎಂದೂ ತಿಳಿಸಿದರು.

ಯುವಕ- ಯುವತಿ ಭೇಟಿಯಾದ ಕೋಣೆಯಲ್ಲಿ ಒಂದು ವಿಷದ ಬಾಟಲಿಯೂ ಸಿಕ್ಕಿದೆ. ಯುವತಿಗೆ ವಿಷ ಕುಡಿಸಲು ಒತ್ತಾಯ ಮಾಡಿರಬಹುದು. ಅದು ಸಾಧ್ಯವಾಗದೇ ಚೂರಿ ಇರಿದಿದ್ದಾನೆ. ಮೊದಲು ಕೊಲೆ ಪ್ರಕರಣ ದಾಖಲಿಸಿ, ಬಳಿಕ ಆರೋಪಿಯ ಆತ್ಮಹತ್ಯೆ ಪ್ರಕರಣ ದಾಖಲಿಸಬೇಕಾಗುತ್ತದೆ’ ಎಂದೂ ಅವರು ಮಾಹಿತಿ ನೀಡಿದರು.

ಡಿಸಿಪಿ ರೋಹನ್ ಜಗದೀಶ್, ಸಿಪಿಐ ಎಸ್.ಎಸ್.ಸಿಮಾನಿ, ಎಸಿಪಿ ಸಂತೋಷ ಸತ್ಯನಾಯಕ ಸ್ಥಳಕ್ಕೆ ಭೇಟಿ ನೀಡಿದರು.


Share It

You cannot copy content of this page