ದುಬೈ: ಇಲ್ಲಿನ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಚಾಂಪಿಯನ್ಸ್ ಕ್ರಿಕೆಟ್ ಟ್ರೋಫಿ-2025 ರ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ 4 ವಿಕೆಟ್ ಗಳಿಂದ ಗೆದ್ದು ಭಾರತ ಫೈನಲ್ ಪ್ರವೇಶಿಸಿದೆ.
ತುಸು ಬ್ಯಾಟಿಂಗ್ ಮಾಡಲು ಕಷ್ಟವಾಗಿದ್ದ ಈ ಪಿಚ್ ನಲ್ಲಿ ಟಾರ್ಗೆಟ್ ತಲುಪಲು 2ನೇ ಬಾರಿ ಬ್ಯಾಟಿಂಗ್ ನಡೆಸುವ ತಂಡ ಕಷ್ಟವಾಗುತ್ತದೆ. ಇಷ್ಟಾದರೂ ಆಸ್ಟ್ರೇಲಿಯಾ ತಂಡವನ್ನು 49.3 ಓವರುಗಳಲ್ಲಿ 264 ರನ್ ಗಳಿಗೆ ಆಲ್ ಔಟ್ ಮಾಡಿದ ಟೀಂ ಇಂಡಿಯಾ ಟಾರ್ಗೆಟ್ ಚೇಸ್ ಮಾಡುವ ಭರದಲ್ಲಿ ಆರಂಭದಲ್ಲಿ ಓಪನರ್ ಗಿಲ್ ವಿಕೆಟ್ ಕಳೆದುಕೊಂಡಿತು. ಆದರೆ ಮತ್ತೊಬ್ಬ ಓಪನರ್ ನಾಯಕ ರೋಹಿತ್ ಶರ್ಮಾ ಕೊಹ್ಲಿ ಜೊತೆಗೆ ಬಿರುಸಾಗಿ ಆಡುತ್ತಿದ್ದಾಗ 28 ರನ್ ಗಳಿಸಿ ಔಟಾದರು. ಆಗ ಸ್ಕೋರ್ 43/2 ಆದಾಗ ಜೊತೆಗೂಡಿದ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ವಿಕೆಟ್ ಮೇಲೆ ಕಚ್ಚಿಕೊಂಡು ಆಡುತ್ತಾ ಆಗಾಗ ಕೆಲ ಚೆಂಡುಗಳನ್ನು ಬೌಂಡರಿ ಗೆರೆ ದಾಟಿಸಿ ಸ್ಕೋರ್ ಅನ್ನು 134 ರನ್ ವರೆಗೆ ಕೊಂಡೊಯ್ದರು. ಆಗ 45 ರನ್ ಗಳಿಸಿದ್ದ ಶ್ರೇಯಸ್ ಅಯ್ಯರ್ ಔಟಾದರು. ಇಷ್ಟಾದರೂ ಕೊಹ್ಲಿ ಅಕ್ಸರ್ ಪಟೇಲ್ ಜೊತೆಗೆ ಸೇರಿ ತುಸು ಚುರುಕಿನ ಬ್ಯಾಟಿಂಗ್ ನಡೆಸಿ ಸ್ಕೋರ್ ಅನ್ನು 178 ರನ್ ವರೆಗೆ ಒಯ್ದಾಗ 27 ರನ್ ಗಳಿಸಿದ್ದ ಅಕ್ಸರ್ ಪಟೇಲ್ ಔಟಾದರು. ಆಗ ಶತಕದ ಸಮೀಪದಲ್ಲಿದ್ದ ಕೊಹ್ಲಿ ತುಸು ಎಚ್ಚರಿಕೆ ಬ್ಯಾಟಿಂಗ್ ನಡೆಸಿದರೂ ಕ್ರೀಸ್ ಗೆ ಬಂದ ಕೆ.ಎಲ್ ರಾಹುಲ್ ಬೀಡು ಬೀಸಾಗಿ ಬ್ಯಾಟ್ ಮಾಡಿ ಬೌಂಡರಿ, ಸಿಕ್ಸರ್ ಬಾರಿಸಿ ಆಗಾಗ ರನ್ ಕದಿಯುತ್ತಾ ಸಾಗಿದರು. ಸ್ಕೋರ್ 225 ರನ್ ಆದಾಗ 5ನೇ ವಿಕೆಟ್ ರೂಪದಲ್ಲಿ ವಿರಾಟ್ ಕೊಹ್ಲಿ 84 ರನ್(98 ಎಸೆತ, 5 ಬೌಂಡರಿ) ಗಳಿಸಿ ಲಾಂಗ್ ಅನ್ ನಲ್ಲಿ ಸಿಕ್ಸರ್ ಹೊಡೆಯುವ ಆತುರದಲ್ಲಿ ಕ್ಯಾಚಿತ್ತು ಔಟಾದರು. ಆಗ ಇಡೀ ಪೆವಿಲಿಯನ್ ಕೊಹ್ಲಿ ಶತಕ ಹೊಡೆಯಲಾಗಲಿಲ್ಲ ಎಂದು ಬೇಜಾರಾಯಿತು. ನಂತರ ಕೆ.ಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಬಿರುಸಾಗಿ ಆಡಿ ಜಯದ ಸಮೀಪ ಸ್ಕೋರ್ ತಂದರು. ಸ್ಕೋರ್ 259 ರನ್ ಆದಾಗ 6ನೇ ವಿಕೆಟ್ ರೂಪದಲ್ಲಿ ಪಾಂಡ್ಯ 28 ರನ್(24 ಎಸೆತ, 1 ಬೌಂಡರಿ, 3 ಸಿಕ್ಸರ್) ಹೊಡೆದು ಔಟಾದರು. ಕಡೆಯಲ್ಲಿ ಸಿಕ್ಸರ್ ಬಾರಿಸಿ ಕರ್ನಾಟಕದ ವಿಕೆಟ್ ಕೀಪರ್-ಬ್ಯಾಟ್ಸ್ ಮನ್ ಕೆ.ಎಲ್ ರಾಹುಲ್ ಅಜೇಯ 42 ರನ್ (34 ಎಸೆತ, 2 ಬೌಂಡರಿ, 2 ಸಿಕ್ಸರ್) ಟೀಂ ಇಂಡಿಯಾ ಫೈನಲ್ ತಲುಪಿಸಿದ ಸಾರ್ಥಕತೆಯಿಂದ ರವೀಂದ್ರ ಜಡೇಜಾ ಜೊತೆಗೆ ಪೆವಿಲಿಯನ್ ಕಡೆ ಗೆಲುವಿನ ಕೇಕೆ ಹಾಕುತ್ತಾ ವಾಪಸ್ಸಾದರು.
ಟೀಂ ಇಂಡಿಯಾ ಹೀಗೆ 48.1 ಓವರುಗಳಲ್ಲೇ 6 ವಿಕೆಟ್ ನಷ್ಟಕ್ಕೆ 267 ರನ್ ಗಳಿಸಿ ಚಾಂಪಿಯನ್ಸ್ ಟ್ರೋಫಿ-2025 ರ ಫೈನಲ್ ಪ್ರವೇಶಿಸಿತು. ಈ ಮೂಲಕ 2023 ರ ಏಕದಿನ ವಿಶ್ವಕಪ್ ಫೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಿದ್ದ ಸೇಡನ್ನು ತೀರಿಸಿಕೊಂಡು ಟೀಂ ಇಂಡಿಯಾ ಗೆದ್ದು ಕ್ರಿಕೆಟ್ ಅಭಿಮಾನಿಗಳು ಖುಷಿ ಪಡುವಂತೆ ಮಾಡಿತು.
ಕಡೆಯಲ್ಲಿ ಮಹತ್ವದ 84 ರನ್ ಗಳಿಸಿ ಟೀಂ ಇಂಡಿಯಾ ಗೆಲ್ಲಲು ಕಾರಣರಾದ ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಆಟಗಾರ ಪ್ರಶಸ್ತಿಗೆ ಭಾಜನರಾದರು. ಶತಕ ವಂಚಿತನಾದರೂ ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿ ಸಿಕ್ಕಾಗ ಕೊಹ್ಲಿ ಬಹಳ ಸಂತೋಷದಿಂದ ಗೆಲುವಿನ ಕೇಕೆ ಹಾಕಿ ಸಂಭ್ರಮಿಸಿದರು.
ಈ ಮೂಲಕ ಟೀಂ ಇಂಡಿಯಾ ಚಾಂಪಿಯನ್ಸ್ ಕ್ರಿಕೆಟ್ ಟ್ರೋಫಿ-2025 ರ ಫೈನಲ್ ಪಂದ್ಯವನ್ನು ಯುಎಇ ದೇಶದ ರಾಜಧಾನಿ ದುಬೈನಲ್ಲೇ ಆಡುವುದನ್ನು ಖಚಿತಪಡಿಸಿಕೊಂಡಿತು.
ಆದಾಗ್ಯೂ ನಾಳೆ ಅಂದರೆ ಮಾರ್ಚ್ 5 ಬುಧವಾರ ಮಧ್ಯಾಹ್ನ 2:30 ರಿಂದ ಪಾಕಿಸ್ತಾನದ ಲಾಹೋರ್ ನಗರದಲ್ಲಿ ಗಡಾಫಿ ಸ್ಟೇಡಿಯಂನಲ್ಲಿ ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ತಂಡಗಳು ಸೆಣಸಾಡಲಿವೆ. ಈ ಸೆಮಿಫೈನಲ್ ಪಂದ್ಯದಲ್ಲಿ ಗೆದ್ದ ತಂಡ ಫೈನಲ್ ನಲ್ಲಿ ಭಾರತ ವಿರುದ್ಧ ಮಾರ್ಚ್ 9 ರ ಮಧ್ಯಾಹ್ನ 2:30 ರಿಂದ ಚಾಂಪಿಯನ್ಸ್ ಟ್ರೋಫಿ ಪಡೆಯಲು ಸೆಣಸಾಡಲಿವೆ.