ಕೆಎಸ್ಆರ್ಟಿಸಿ ಕಚೇರಿಯಲ್ಲಿ ಮಹಿಳಾ ದಿನಾರಣೆ : ಪದ್ಮಶ್ರೀ ಭೀಮವ್ವ ದೊಡ್ಡಬಾಳಪ್ಪ ಭಾಗಿ
ಬೆಂಗಳೂರು: ಮಹಿಳಾ ಸಬಲೀಕರಣದಲ್ಲಿ ನಮ್ಮ ಸಾರಿಗೆ ಇಲಾಖೆಯ ಶಕ್ತಿ ಯೋಜನೆ ಮಹತ್ವದ್ದು. ಈ ಯೋಜನೆ ನಮ್ಮ ಸರಕಾರ ಮಹಿಳೆಯರಿಗೆ ನೀಡಿದ ನಿಜವಾದ ಗೌರವ ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.
ಕೆಎಸ್ಆರ್ಟಿಸಿ ಕೇಂದ್ರ ಕಚೇರಿಯಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಪದ್ಮಶ್ರೀ ಪುರಸ್ಕೃತೆ ಭೀಮವ್ವ ದೊಡ್ಡಬಾಳಪ್ಪ ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ, ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ, ಕಳೆದ ಒಂದೂವರೆ ವರ್ಷದಿಂದ ಮಹಿಳೆಯರ ಶ್ರೇಯೋಭಿವೃದ್ಧಿಗೆ ಶಕ್ತಿ ಯೋಜನೆ ಸಹಾಯಕವಾಗಿದೆ. ಈಗಾಗಲೇ ೪೦೦ ಕೋಟಿ ಮಹಿಳೆಯರು ನಮ್ಮ ಸಾರಿಗೆ ಬಸ್ಗಳಲ್ಲಿ ಪ್ರಯಾಣ ಮಾಡಿದ್ದಾರೆ ಎಂದು ತಿಳಿಸಿದರು.
ಇಂದು ಎಲ್ಲಾ ರಂಗಗಳಲ್ಲಿಯೂ ಮಹಿಳೆಯರು ಪುರುಷರಿಗೆ ಸಮಾನವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಮ್ಮ ನಿಗಮದ ತಾಂತ್ರಿಕ ಸಿಬ್ಬಂದಿ ಪುರುಷ ಸಿಬ್ಬಂದಿಯಷ್ಟೇ ಹೆಚ್ಚಿನ ಕಾರ್ಯಕ್ಷಮತೆಯಿಂದ ಕಾರ್ಯನಿರ್ವಹಿಸಿ, ವಾಹನಗಳ ಪುನಃಶ್ಚೇತನ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದರು.
ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಎಲ್ಲಾ ರೀತಿಯಿಂದಲೂ ಅನುಕೂಲ ಕಲ್ಪಿಸಲಾಗುತ್ತಿದೆ, ಮಾರ್ಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಿರ್ವಾಹಕಿಯರಿಗೂ ಕೂಡ ಮಾರ್ಗ ನಿಯೋಜನೆಯಲ್ಲಿ ಪ್ರಾಶಸ್ತ್ಯ ನೀಡಲಾಗುತ್ತಿದೆ. ಮಹಿಳಾ ಸಮಾನತೆ, ಸಬಲೀಕರಣ ಎಂಬುದನ್ನು ನಮ್ಮಲ್ಲಿ ಅಕ್ಷರಶಃ ಕಾಣಬಹುದಾಗಿದೆ ಎಂದು ತಿಳಿಸಿದರು.
ಕೆಎಸ್ಆರ್ಟಿಸಿ ಎಂಡಿ ವಿ. ಅನ್ಬುಕುಮಾರ್, ಡಾ. ನಂದಿನಿದೇವಿ ಕೆ., ನಿರ್ದೇಶಕರು (ಸಿಬ್ಬಂದಿ ಮತ್ತು ಜಾಗೃತ) ಹಾಗೂ ಹಿರಿಯ ಅಧಿಕಾರಿ/ಸಿಬ್ಬಂದಿ ಭಾಗವಹಿಸಿದ್ದರು.