ಬಳ್ಳಾರಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಬೆಂಗಳೂರಿಗೆ ಬಂದಿದ್ದಾಗ ಭೇಟಿಯಾಗಿ ಮಾತುಕತೆ ನಡೆಸಬೇಕು ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಮುಂದಾಗಿದ್ದರು. ಆದರೆ, ಶ್ರೀರಾಮುಲು ಅವರ ವಿರುದ್ಧ ಮುನಿಸಿಕೊಂಡಿದ್ದ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅಮಿತ್ ಶಾ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಆದರೆ, ಶ್ರೀರಾಮುಲುಗೆ ಅಮಿತ್ ಶಾ ಭೇಟಿ ಅವಕಾಶ ಸಿಗಲಿಲ್ಲ. ಈ ವಿಷಯ ಇದೀಗ ಬಳ್ಳಾರಿ ರಾಜಕಾರಣದಲ್ಲಿ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ರಾಜ್ಯ ಬಿಜೆಪಿ ನಾಯಕರ ವಿರುದ್ಧ ಮುನಿಸಿಕೊಂಡ ಬಳಿಕ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಅಳಲು ತೋಡಿಕೊಳ್ಳಲು ಶ್ರೀರಾಮುಲು ಮುಂದಾಗಿದ್ದರು.
ಒಂದು ಬಾರಿ ಅವರನ್ನು ದೆಹಲಿಗೆ ಬರುವಂತೆ ಹೇಳಿದ್ದ ಹೈಕಮಾಂಡ್ ನಾಯಕರು, ನಂತರ ಸದ್ಯಕ್ಕೆ ದೆಹಲಿಗೆ ಬರುವುದು ಬೇಡ ಎಂಬ ಸಂದೇಶ ಕಳುಹಿಸಿದ್ದರು. ಇದರಿಂದಾಗಿ ಹೈಕಮಾಂಡ್ ಮುಂದೆ ಅಸಮಾಧಾನ ಹೇಳಿಕೊಳ್ಳುವ ರಾಮುಲು ಪ್ರಯತ್ನಕ್ಕೆ ತಡೆಯಾಗಿತ್ತು. ಅಮಿತ್ ಶಾ ಬೆಂಗಳೂರಿಗೆ ಬರುವುದನ್ನೇ ಶ್ರೀರಾಮುಲು ಎದುರು ನೋಡುತ್ತಿದ್ದರು. ಅಮಿತ್ ಶಾ ಅವರೊಂದಿಗಿನ ತಮ್ಮ ಹಳೆಯ ಸ್ನೇಹವನ್ನು ಬಳಸಿಕೊಂಡು, ಭೇಟಿಯಾಗಿ ಮಾತುಕತೆ ನಡೆಸುವ ಉತ್ಸಾಹದಿಂದ ಇದ್ದರು. ಶ್ರೀರಾಮುಲುಗೆ ಜನಾರ್ದನ ರೆಡ್ಡಿ ತಿರುಗೇಟು ನೀಡಿದ್ದಾರೆ.
ಸದ್ಯ ಗಂಗಾವತಿ ಶಾಸಕರಾಗಿರುವ ಗಾಲಿ ಜನಾರ್ದನ ರೆಡ್ಡಿ ಶುಕ್ರವಾರ ರಾಜ್ಯ ಬಿಜೆಪಿ ಸಹ ಉಸ್ತುವಾರಿ ಸುಧಾಕರ್ ರೆಡ್ಡಿ ಜೊತೆಗೂಡಿ ಶಾ ಭೇಟಿಯಾಗಿದ್ದಾರೆ. ಮತ್ತೊಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ, ಕೋರ್ ಕಮಿಟಿ ಸಭೆ ಬೆಳವಣಿಗೆ, ರಾಜ್ಯಸಭಾ ಸದಸ್ಯ ಸ್ಥಾನದ ಬಗ್ಗೆ ಚರ್ಚಿಸಲು ಶ್ರೀರಾಮುಲು ಅವಕಾಶ ಕೇಳಿದ್ದರು. ಆದರೆ, ಶ್ರೀರಾಮುಲು ಅವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ಜನಾರ್ದನ ರೆಡ್ಡಿ, ಶಾ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಶುಕ್ರವಾರ ಬೆಂಗಳೂರಿಗೆ ಆಗಮಿಸಿದ್ದ ಅಮಿತ್ ಶಾ, ಮಾರತ್ತಹಳ್ಳಿಯಲ್ಲಿ ‘ವಿಶ್ವೇಶತೀರ್ಥ ಸ್ಮಾರಕ ಆಸ್ಪತ್ರೆ’ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಮಾಜಿ ಸಚಿವ ಅರವಿಂದ ಲಿಂಬಾವಳಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಅಮಿತ್ ಶಾ ಭೇಟಿ ವೇಳೆ ರಾಜ್ಯ ರಾಜಕೀಯ ನಾಯಕರ ಭೇಟಿ, ಚರ್ಚೆ ನಿಗದಿಯಾಗಿರಲಿಲ್ಲ.