ಬೆಳಗಾವಿ: ಇತ್ತೀಚೆಗೆ ಬೆಳಗಾವಿ ಗಡಿಯಲ್ಲಿ ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್ ಮೇಲೆ ಎಂಇಎಸ್ ಪುಂಡರು ಹಲ್ಲೆ ನಡೆಸಿದ ಕ ಕೇಸ್ ರಾಜ್ಯದಾದ್ಯಂತ ವಿವಾದ ಎಬ್ಬಿಸಿತ್ತು. ಇದೀಗ ಆ ಘಟನೆಯ ಈ ಕಹಿ ನೆನಪು ಮಾಸುವ ಮುನ್ನವೇ, ಬೆಳಗಾವಿಯಲ್ಲಿ ಎಂಇಎಸ್ ಪುಂಡರ ಅಟ್ಟಹಾಸ ಮತ್ತೆ ಮರುಕಳಿಸಿದೆ. ಬೆಳಗಾವಿ ತಾಲ್ಲೂಕಿನ ಅಂಬೇವಾಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ನಾಗಪ್ಪ ಎಂಬುವರ ಮೇಲೆ, ತಾವು ಹೇಳಿದ ಕೆಲಸ ಮಾಡಿಲ್ಲ ಎಂದು ಕಿಡಿಕಾರಿ ಎಂಇಎಸ್ ಪುಂಡರು ದಾಳಿ ನಡೆಸಿದ್ದಾರೆ.
ಬೆಳಗಾವಿ ತಾಲೂಕಿನ ಗೋಜಗಾ ಸಮೀಪ ಬೈಕ್ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿದೆ. ಅಂಬೇವಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಚೇತನ್ ಪಾಟೀಲ್, ಹಾಲಿ ಅಧ್ಯಕ್ಷರ ಪುತ್ರ ವಿಕ್ರಮ್ ಯಳ್ಳೂರಕರ್ ಅವರ ಗ್ಯಾಂಗ್ ಹಲ್ಲೆ ಮಾಡಿದೆ ಎನ್ನಲಾಗಿದೆ.
‘ನಾವು ಹೇಳಿದ ಹಾಗೆ ನೀವು ಕೆಲಸ ಮಾಡಬೇಕು. ಇಲ್ಲದಿದ್ದರೆ ಲಂಚ ಪಡೆದಿದ್ದೀಯಾ ಎಂಬುದಾಗಿ ಕೇಸ್ ಹಾಕುತ್ತೇವೆ’ ಎಂದು ಹಲ್ಲೆಕೋರರು ಧಮ್ಕಿ ಹಾಕಿದ್ದಾರೆ. ಚೇತನ್ ಪಾಟೀಲ್, ವಿಕ್ರಮ್ ಯಳ್ಳೂರಕರ್ ಅವರ ಗ್ಯಾಂಗ್ ಮತ್ತು ಎಂಇಎಸ್ ಪುಂಡರು ಜತೆಯಾಗಿ ಹಲ್ಲೆ ಮಾಡಿದ್ದಾರೆ. ಚೇತನ್ ಪಾಟೀಲ್ ಎಂಇಎಸ್ ಜಿಲ್ಲಾ ಸಂಚಾಲಕನಾಗಿದ್ದಾನೆ.
ಕೆಲವು ದಿನಗಳ ಹಿಂದಷ್ಟೇ ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ ನಡೆದಿತ್ತು. ಈಗ, ತಾವು ಹೇಳಿದಂತೆ ಅಕ್ರಮ ಕೆಲಸ ಮಾಡಿಲ್ಲ ಎಂದು ಎಂಇಎಸ್ ಪುಂಡರಿಂದ ಗ್ರಾಮ ಪಂಚಾಯತಿ ಕಾರ್ಯದರ್ಶಿ ಮೇಲೆ ದಾಳಿ ನಡೆಸಲಾಗಿದೆ. ಗಾಯಾಳು ಗ್ರಾ.ಪಂ ಕಾರ್ಯದರ್ಶಿ ನಾಗಪ್ಪ ಅವರನ್ನು ಸದ್ಯ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.