ರಾಜಕೀಯ ಸುದ್ದಿ

ಸಿಎಂ ಬದಲಾವಣೆ: ಮತ್ತಷ್ಟು ಸಚಿವರನ್ನು ದೆಹಲಿಗೆ ಆಹ್ವಾನಿಸಿದ ಎಐಸಿಸಿ

Share It

ನವದೆಹಲಿ : ಕರ್ನಾಟಕ ಕಾಂಗ್ರೆಸ್​ನಲ್ಲಿ ಕುರ್ಚಿ ಬದಲಾವಣೆ ಫೈಟ್ ಮತ್ತೊಂದು ರೂಪ ಪಡೆದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆ ನೀಡಿದ ಬಳಿಕ ಬಹಿರಂಗವಾಗಿ ಮಾತನಾಡುತ್ತಿದ್ದ ನಾಯಕರು ಮೌನವಾಗಿದ್ದರು.‌ ಇದೀಗ ಹೈಕಮಾಂಡ್ ನಾಯಕರೇ ಅಖಾಡಕ್ಕೆ ಇಳಿದು, ಸಚಿವರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದಾರೆ.

ಕಳೆದ 2 ದಿನಗಳಿಂದ ಒಬ್ಬೊಬ್ಬರೇ ಸಚಿವರು ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ. ರಾಜ್ಯ ವಿಧಾನಮಂಡಲ ಅಧಿವೇಶನದ ಮಧ್ಯೆಯೂ ಸಚಿವರು ದೆಹಲಿಯಲ್ಲಿ ಎಐಸಿಸಿ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಅವರನ್ನು ಭೇಟಿಯಾಗಿದ್ದಾರೆ‌.

ದೆಹಲಿಯಾತ್ರೆ ಮಾಡುತ್ತಿರುವ ಸಚಿವರೆಲ್ಲರೂ ಸಿಎಂ ಬದಲಾವಣೆ ಬಗ್ಗೆ ಪ್ರತ್ಯೇಕವಾಗಿಯೇ ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಭೇಟಿಯಾಗುತ್ತಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಮಂಗಳವಾರವಷ್ಟೇ ಆರೋಗ್ಯ ಸಚಿವ ದಿನೇಶ್ ಗುಡೂರಾವ್​ಗೆ ಬುಲಾವ್ ನೀಡಿದ್ದ ಕೆ.ಸಿ ವೇಣುಗೋಪಾಲ್, ಎಐಸಿಸಿ ಕಚೇರಿಯಲ್ಲಿ ಮಾತುಕತೆ ನಡೆಸಿದ್ದರು. ಅದಾದ ಬಳಿಕ ಕಂದಾಯ ಸಚಿವ ಕೃಷ್ಣ ಭೈರೇಗೌಡರಿಗೆ ಬುಲಾವ್ ನೀಡಿ ಮಾತುಕತೆ ಮಾಡಿದ್ದಾರೆ.

ಹಲವು ಮಂದಿ ಸಚಿವರು ದೆಹಲಿಗೆ: ಹೈಕಮಾಂಡ್ ಜತೆ ಮಾತುಕತೆ!
ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ್, ಎಂ.ಬಿ ಪಾಟೀಲ್‌ ಜೊತೆ ಬುಧವಾರ ಕೆ.ಸಿ ವೇಣುಗೋಪಾಲ್ ಚರ್ಚೆ ನಡೆಸಿದ್ದಾರೆ. ಪಕ್ಷದ ಆಂತರಿಕ ಬೆಳವಣಿಗೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಒಂದೆಡೆ ಹೈಕಮಾಂಡ್ ಜತೆ ಸಚಿವರು ಒಬ್ಬೊಬ್ಬರಾಗಿ ಮಾತುಕತೆ ನಡೆಸುತ್ತಿದ್ದರೆ, ಪದೇಪದೇ ಸಿಎಂ ಬದಲಾವಣೆ ಬಗ್ಗೆ ಕೂಗು ಎಬ್ಬಿಸುತ್ತಿರುವವರಿಗೆ ಸಿಎಂ ಸಿದ್ದರಾಮಯ್ಯ ವಿಧಾನಸಭೆಯಲ್ಲೇ ಉತ್ತರ ಕೊಟ್ಟಿದ್ದಾರೆ. 5 ವರ್ಷ ನಾನೇ ಸಿಎಂ ಎಂದು ಹೇಳಿದ್ದಾರೆ.

ಮತ್ತೊಂದೆಡೆ, ಕೆಪಿಸಿಸಿ ಅಧ್ಯಕ್ಷರಾಗಿ 5 ವರ್ಷ ಪೂರೈಸಿರುವ ನೆಪದಲ್ಲಿ ಶಾಸಕರಿಗೆ, ಪಕ್ಷದ ಪದಾಧಿಕಾರಿಗಳಿಗೆ ಡಿನ್ನರ್ ಪಾರ್ಟಿ ಆಯೋಜಿಸಲು ಡಿಸಿಎಂ ಡಿ.ಕೆ ಶಿವಕುಮಾರ್ ಮುಂದಾಗಿದ್ದಾರೆ. ಇದೂ ಸಹ ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ ಎನ್ನಲಾಗಿದೆ. ಒಟ್ಟಿನಲ್ಲಿ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಸಿಎಂ ಬದಲಾವಣೆ ಚರ್ಚೆ ನಡುವೆ ಹೈಕಮಾಂಡ್ ನಾಯಕರು ಸಚಿವರನ್ನು ಕರೆದು ಪ್ರತ್ಯೇಕವಾಗಿ ಮಾತನಾಡಿಸುತ್ತಿರುವುದು ಕುತೂಹಲ ಮೂಡಿಸಿದೆ. ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸಚಿವರ ಅಭಿಪ್ರಾಯ ಸಂಗ್ರಹಕ್ಕೆ ಕೈ ಹೈಕಮಾಂಡ್ ಮುಂದಾಗಿದೆಯಾ? ಎಂಬ ಅನುಮಾನಗಳು ಇದೀಗ ಸೃಷ್ಟಿಯಾಗಿವೆ.


Share It

You cannot copy content of this page