ಜಮೀನು ವಿವಾದ: ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಆರೋಪ

Share It

ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲ್ಲೂಕಿನ ಹರ್ಲಾಪುರ ಗ್ರಾಮದಲ್ಲಿ ಜಮೀನು ಹಕ್ಕಿಗಾಗಿ ನಡೆದ ಜಗಳದಲ್ಲಿ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ.

4 ಎಕರೆ 19 ಗುಂಟೆ ಜಮೀನಿಗೆ ಸಂಬಂಧಿಸಿದಂತೆ ಕಳೆದ ಕೆಲವು ವರ್ಷಗಳಿಂದ ತಂಟೆ- ತಕರಾರು ನಡೆದೇ ಇದೆ. 2025ರ ಫೆಬ್ರುವರಿ 20ರಂದು ಇದೇ ವಿಚಾರವಾಗಿ ಮತ್ತೆ ಜಗಳ ನಡೆದಿದ್ದು, ಪೊಲೀಸರ ಎದುರೇ ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದಾರೆ ಎಂದು ಅರೋಪಿಸಲಾಗಿದೆ.

’15ಕ್ಕೂ ಹೆಚ್ಚು ಜನ ರೈತ ಸಂಘದವರ ಮುಂದಾಳತ್ವದಲ್ಲಿ ಬಂದು ಹಲ್ಲೆ ಮಾಡಿದ್ದಾರೆ. ಆಗ ನಾನು ಪೊಲೀಸರಿಗೆ ಫೋನ್ ಮಾಡಿದೆ. ಪೊಲೀಸರು ಸ್ಥಳಕ್ಕೆ ಬಂದಾಗಲೇ ಅವರ ಮುಂದೆಯೇ ನನ್ನ ಬಟ್ಟೆ ಹರಿದು ಹಲ್ಲೆ ಮಾಡಿದ್ದಾರೆ’ ಎಂದು ಸಂತ್ರಸ್ತ ಮಹಿಳೆ ದೂರಿದ್ದಾರೆ.

‘ಅರೆಬೆತ್ತಲೆಯಾಗಿಯೇ ನಾನು ಸವದತ್ತಿ ಪೊಲೀಸ್ ಠಾಣೆಗೆ ಹೋದೆ. ಆದರೆ ಪೊಲೀಸರು ಬೆತ್ತಲೆ ಮಾಡಿ ಹೊಡೆದಿದ್ದಕ್ಕೆ ಸಾಕ್ಷಿ ಕೊಡಿ ಎಂದು ಕೇಳಿದರು. ದೂರು ಪಡೆಯಲಿಲ್ಲ. ನನ್ನ ಹೊಟ್ಟೆಗೆ ತೀವ್ರ ಪೆಟ್ಟಾಗಿದ್ದರಿಂದ ಸವದತ್ತಿ ತಾಲ್ಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು, ನಂತರ ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದೆ’ ಎಂದು ಹೇಳಿದ್ದಾರೆ.

ಎರಡು ಬಾರಿ ದೂರು ದಾಖಲು:

ಇದೇ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ 2024ರ ಜೂನ್ 18 ಹಾಗೂ 2025ರ ಜನವರಿ 1ರಂದು ಎರಡು ಬಾರಿ ಸಂತ್ರಸ್ತ ಮಹಿಳೆ ದೂರು ನೀಡಿದ್ದಾರೆ.

ಜೂನ್ 15ರಂದು ಜಮೀನಿನಲ್ಲಿ ಬಿತ್ತಲು ಮುಂದಾದಾಗ ಏಳು ಜನ ಗುಂಪು ಕಟ್ಟಿಕೊಂಡು ಬಂದು ಬಿತ್ತಲು ತಕರಾರು ಮಾಡಿದರು. ನನ್ನ ಮೇಲೆ ಹಲ್ಲೆ ಕೂಡ ಮಾಡಿದ್ದಾರೆ ಎಂದು ಸಂತ್ರಸ್ತೆ ಜೂನ್ 18ರಂದು ಸವದತ್ತಿ ಠಾಣೆಗೆ ದೂರು ನೀಡಿದ್ದಾರೆ.

ನಂತರ ಡಿಸೆಂಬರ್ 19ರಂದು ಹೊಲದಲ್ಲಿ ಕಳೆ ತೆಗೆಯುತ್ತಿದ್ದಾಗ ಯಲ್ಲಪ್ಪ ಉರೂಫ್ ಪಟ್ಟಣಗೌಡ ಪಾಟೀಲ ಎಂಬುವವರು ಹೊಲಕ್ಕೆ ಬಂದು ಜಗಳ ತೆಗೆದರು. ತನ್ನ ಬಟ್ಟೆ ಹರಿದು ಮಾನಭಂಗ ಮಾಡಲು ಯತ್ನಿಸಿದರು ಎಂದು ಸಂತ್ರಸ್ತೆ ಜನವರಿ 1ರಂದು ದೂರು ದಾಖಲಿಸಿದ್ದಾರೆ.

ಇದೇ ವಿಚಾರವಾಗಿ ಮತ್ತೆ ಫೆಬ್ರುವರಿ 20ರಂದು ಕಲಹ ನಡೆದಿದೆ. ಹೊಲ ತಮ್ಮದು ಎಂದು ಹೇಳಿಕೊಂಡು ಆರೋಪಿಗಳು ರೈತ ಸಂಘಟನೆಯವರನ್ನು ಕರೆದುಕೊಂಡು ಬಂದು ಗಲಾಟೆ ಮಾಡಿದ್ದಾರೆ. ಬೆಳೆದ ಬೆಳೆಯನ್ನೂ ತಾವೇ ತೆಗೆದುಕೊಂಡು ಹೋಗುವುದಾಗಿ ಹೇಳಿದ್ದಾರೆ. ಇದಕ್ಕೆ ವಿರೋಧಿಸಿದ್ದರಿಂದ ಪುರುಷರು, ಮಹಿಳೆಯರು ಸೇರಿ ಬಟ್ಟೆ ಹರಿದು ಹೊಡೆದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ‘4 ಎಕರೆ 19 ಗುಂಟೆ ಜಮೀನಿಗೆ ಸಂಬಂದಿಸಿದಂತೆ ತಂಟೆ ಆಗಿರುವುದು ನಿಜ. ಮಹಿಳೆಯ ವಿಚಾರವಾಗಿ ಈ ಹಿಂದೆ ಕೂಡ ದೂರು ಪಡೆದು ಕ್ರಮ ವಹಿಸಲಾಗಿದೆ. ಪೊಲೀಸರ ಮುಂದೆ ವಿವಸ್ತ್ರಗೊಳಿಸಿ ಹೊಡೆದಿದ್ದಾರೆ ಎಂಬ ಅರೋಪ ಪರಿಶೀಲನೆ ಮಾಡಲಾಗುವುದು’ ಎಂದರು.


Share It

You May Have Missed

You cannot copy content of this page