ರಾಜಕೀಯ ಸುದ್ದಿ

ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಗೆ ಹಕ್ಕುಚ್ಯುತಿ ಮಾಡುವುದಾಗಿ ಪರಿಷತ್ ಸಭಾಪತಿ ಹೊರಟ್ಟಿ ವಾರ್ನಿಂಗ್

Share It

ಬೆಂಗಳೂರು: ನಾನು ಪತ್ರ ಕೊಟ್ಟ ಮೇಲೂ ಸದಸ್ಯರನ್ನು ತೋಟಗಾರಿಕೆ ಇಲಾಖೆಯ ನಾಮನಿರ್ದೇಶನ ಮಾಡಬೇಕು. ಇಲ್ಲದಿದ್ದರೆ ಇವತ್ತೇ ಹಕ್ಕುಚ್ಯುತಿಗೆ ನೀಡಬೇಕಾಗುತ್ತದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಅವರು, ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಎಚ್ಚರಿಕೆ ನೀಡಿದ ಪ್ರಸಂಗ ಜರುಗಿತು.

ಪ್ರಶೋತ್ತರ ಅವಧಿಯಲ್ಲಿ ಬಿಜೆಪಿ ಹನುಮಂತ ನಿರಾಣಿ ಅವರು, ಬಾಗಲಕೋಟೆಯಲ್ಲಿರುವ ರಾಜ್ಯದ ಏಕೈಕ ತೋಟಗಾರಿಕೆ ವಿಶ್ವವಿದ್ಯಾನಿಲಯಕ್ಕೆ ನನ್ನನ್ನು ನಾಮನಿರ್ದೇಶನ ಮಾಡಲಾಗಿತ್ತು. ಇಲ್ಲಿ ಒಟ್ಟು 13 ಮಂದಿಯನ್ನು ನಾಮನಿರ್ದೇಶನ ಮಾಡಲಾಗಿದೆ. ಇದರಲ್ಲಿ ನನ್ನನ್ನು ಸಹ ಓರ್ವ ಸದಸ್ಯನಾಗಿ ನಾಮನಿರ್ದೇಶನ ಮಾಡಲಾಗಿತ್ತು. ಪ್ರತಿಯೊಂದು ವಿವಿಗೆ ವಿಧಾನಪರಿಷತ್ ಸದಸ್ಯರನ್ನು ನಾಮನಿರ್ದೇಶನ ಮಾಡಬೇಕೆಂಬ ನಿಯಮವಿದೆ. ಆದರೂ ನನ್ನ ನೇಮಕಾತಿಯನ್ನು ಏಕೆ ತಡೆಹಿಡಿಯಲಾಗಿದೆ ಎಂದು ಪ್ರಶ್ನಿಸಿದರು.

ಸಿಎಂ ಬಳಿ ಮಾತನಾಡಬೇಕೆಂದು ಸಚಿವ ಮಲ್ಲಿಕಾರ್ಜುನ್ ಹೇಳುತ್ತಿದ್ದಂತೆ ಆಕ್ರೋಶಗೊಂಡ ಸಭಾಪತಿ ಬಸವರಾಜ ಹೊರಟ್ಟಿ, ನಾನು ಹೇಳಿದ ಮೇಲೂ ನೀವು ಸಿಎಂ ಜೊತೆ ಮಾತನಾಡುವುದು ಏನು? ನೀವು ಇಂದೇ ಆದೇಶ ಮಾಡಬೇಕು. ಇಲ್ಲದಿದ್ದರೆ ನಿಮ್ಮ ವಿರುದ್ಧ ಹಕ್ಕುಚ್ಯುತಿ ಮಂಡಿಸಬೇಕಾಗುತ್ತದೆ ಎಂದು ಗುಡುಗಿದರು.

ನಾನು ಎರಡು ಬಾರಿ ತೋಟಗಾರಿಕೆ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರನ್ನು ಭೇಟಿ ಮಾಡಿದ್ದೆ. ಸಾಲದಕ್ಕೆ ಎರಡು ಬಾರಿ ಸಭಾಪತಿಗಳಾದ ನೀವೇ ಪತ್ರವನ್ನು ಕೊಟ್ಟಿದ್ದೀರಿ. ವಿವಿ ಕುಲಪತಿ, ಸಂಬಂಧಪಟ್ಟ ಅಧಿಕಾರಿಗಳನ್ನು ಹತ್ತಾರು ಸಾರಿ ಭೇಟಿ ಮಾಡಿದ್ದೇನೆ. ಜನಪ್ರತಿನಿಧಿಗಳಾದ ನನ್ನ ಪರಿಸ್ಥಿತಿಯೇ ಹೀಗಾದರೆ ಬೇರೆಯವರ ಪರಿಸ್ಥಿತಿ ಇನೇನು ಎಂದು ಪ್ರಶ್ನಿಸಿದರು.

ಈ ವೇಳೆ ಮಧ್ಯಪ್ರವೇಶ ಮಾಡಿದ ಹೊರಟ್ಟಿ, ನಾನು ಎರಡು ಬಾರಿ ಪತ್ರ ಕೊಟ್ಟಿದ್ದೇನೆ. ತೋಟಗಾರಿಕೆ ಇಲಾಖೆಗೆ ನಾಮನಿರ್ದೇಶನ ಸದಸ್ಯರನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ. ಸರ್ಕಾರದ ಆದೇಶಕ್ಕೆ ಬೆಲೆಯಿಲ್ಲವೆ? ನಿಮ್ಮ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಹೊರಟ್ಟಿ ತರಾಟೆಗೆ ತೆಗೆದುಕೊಂಡರು.

ಆಗ ಮಧ್ಯಪ್ರವೇಶಿಸಿದ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸಭಾಪತಿಗಳ ಪತ್ರಕ್ಕೆ ಬೆಲೆ ಕೊಡುವುದಿಲ್ಲ ಎಂದರೆ ಹೇಗೆ? ಪೀಠಕ್ಕೆ ಗೌರವವಿಲ್ಲವೆ? ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಏರಿದ ಧ್ವನಿಯಲ್ಲಿ ಹರಿಹಾಯ್ದರು.

ಈ ವೇಳೆ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್, ಅವರ ಕಡತ ಮುಖ್ಯಮಂತ್ರಿಗಳ ಬಳಿ ಇದೆ. ಕೆಲವು ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದೆ ಎಂಬುದನ್ನು ಒಪ್ಪಿಕೊಳ್ಳುವೆ. ತಕ್ಷಣವೇ ಅವರ ಆದೇಶವನ್ನು ಅನುಷ್ಠಾನ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುತ್ತೇನೆ. ಇನ್ನು ಮುಂದೆ ಇಂಥ ಪ್ರಮಾದಗಳು ಆಗದಂತೆ ಎಚ್ಚರ ವಹಿಸುವುದಾಗಿ ಸದನಕ್ಕೆ ಆಶ್ವಾಸನೆ ನೀಡಿದರು.


Share It

You cannot copy content of this page