ರಾಜಕೀಯ ಸುದ್ದಿ

ಸದನಗಳು ಬಿಸಿಯೂಟದ ಶಾಲೆಗಳಾಗಿವೆ: ಶಾಸಕರಿಗೆ ಕೊಡುವ ಬೋನಸ್ ವಿರುದ್ಧ ಪಿಐಎಲ್

Share It

ಬೆಳಗಾವಿ: ಹಾಜರಾತಿ ಹೆಚ್ಚಳಕ್ಕಾಗಿ ಸದನದಲ್ಲಿ ಜನಪ್ರತಿನಿಧಿಗಳಿಗೆ ಊಟ-ಉಪಾಹಾರ, ಚಹಾ-ಕಾಫಿ, ರಿಕ್ರೈನರ್ ಚೇರ್ ಸೌಕರ್ಯ ಒದಗಿಸುತ್ತಿರುವ ಸರ್ಕಾರದ ಕ್ರಮ ಮತ್ತು ಮನಬಂದಂತೆ ತಮ್ಮ ವೇತನ, ಭತ್ಯೆ ಹೆಚ್ಚಿಸಿಕೊಳ್ಳುತ್ತಿರುವ ಶಾಸಕರ ನಡೆ ಪ್ರಶ್ನಿಸಿ, ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ದಾಖಲಿಸಲಾಗುವುದು ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಧಿವೇಶನ ಸಮಯದಲ್ಲಿ ಸದನದಲ್ಲಿ ಪಾಲ್ಗೊಳ್ಳುವ ಜನಪ್ರತಿನಿಧಿಗಳಿಗೆ ದಿನದ ಭತ್ಯೆ ನೀಡಲಾಗುತ್ತದೆ. ಅವರಿಗೆ ಊಟ-ಉಪಾಹಾರ, ಚಹಾ-ಕಾಫಿ, ರಿಕ್ರೈನರ್ ಚೇರ್ ಸೌಕರ್ಯ ಕಲ್ಪಿಸಲು ನಿಯಮಾವಳಿ ಅವಕಾಶವಿಲ್ಲ. ಆದರೂ, ಅವೆಲ್ಲವನ್ನೂ ಕಲ್ಪಿಸುತ್ತಿರುವುದು ಸರಿಯಲ್ಲ. ಇದಕ್ಕೆ ತಡೆಯೊಡ್ಡದಿದ್ದರೆ ಪಿಐಎಲ್ ದಾಖಲಿಸುವ ಬಗ್ಗೆ ರಾಜ್ಯಪಾಲರು, ಉಭಯ ಸದನಗಳ ಅಧ್ಯಕ್ಷರು, ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ ಎಂದರು.

ಸದನದಲ್ಲಿ ಪಾಲ್ಗೊಳ್ಳುವುದು ಜನಪ್ರತಿನಿಧಿಯ ಜವಾಬ್ದಾರಿ. ಇದಕ್ಕಾಗಿ ಸಾರ್ವಜನಿಕರ ತೆರಿಗೆ ಹಣದಲ್ಲಿ ಅವರಿಗೆ ಸೌಕರ್ಯ ಕೊಡುವುದು ಬೇಕಿಲ್ಲ. ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವುದೇನೋ ಸರಿ. ಆದರೆ, ಸದನಗಳೂ ಈಗ ಮಧ್ಯಾಹ್ನ ಬಿಸಿಯೂಟದ ಶಾಲೆಗಳಾಗಿವೆ ಎಂದು ವ್ಯಂಗ್ಯವಾಡಿದರು.

ಸದನಕ್ಕೆ ಯಾರು ನಿಯಮಿತವಾಗಿ ಹಾಜರಾಗುವುದಿಲ್ಲವೋ ಅವರ ವಿರುದ್ದ ಕ್ರಮ ಜರುಗಿಸಿ, ದಂಡ ವಿಧಿಸಿ. ಆಗ ತನ್ನಿಂತಾನೇ ಹಾಜರಾಗುತ್ತಾರೆ. ಅದನ್ನು ಬಿಟ್ಟು ಸದನದತ್ತ ಅವರನ್ನು ಸೆಳೆಯುವುದಕ್ಕಾಗಿಯೇ ವಿವಿಧ ಸೌಕರ್ಯಗಳ ನೆಪದಲ್ಲಿ ಸರ್ಕಾರಿ ಹಣದ ಪೋಲು ಮಾಡಬಾರದು ಎಂದರು.

ಮಾರುಕಟ್ಟೆಯಲ್ಲಿ ಬೆಲೆಬಾಳುವ ಐಷಾರಾಮಿ ಕಾರುಗಳು ಪ್ರತಿ ಕಿ.ಮೀಗೆ ₹18 ದರದಲ್ಲಿ ಬಾಡಿಗೆಗೆ ಸಿಗುತ್ತಿವೆ. ಆದರೆ, ಜನಪ್ರತಿನಿಧಿಗಳು ಪ್ರತಿ ಕಿ.ಮೀಗೆ ₹35 ಪ್ರಯಾಣಭತ್ಯೆ ಪಡೆಯುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.


Share It

You cannot copy content of this page