ಬೆಂಗಳೂರು: ಸತ್ತು ಸ್ವರ್ಗದಲ್ಲಿರುವ ನಿನ್ನ ತಾಯಿ ನಿನಗೆ ಸಂದೇಶ ಕಳುಹಿಸುತ್ತಿದ್ದು, ಆತನನ್ನು ಕೊಲ್ಲುವಂತೆ ಆದೇಶಿಸಿದ್ದಾಳೆ ಎಂದು ಪ್ರಿಯಕರನ ತಲೆಗೆ ತುಂಬಿದ್ದ ಪತ್ನಿ ತನ್ನ ಗಂಡನನ್ನು ತುಂಡುತುಂಡಾಗಿ ಕತ್ತರಿಸಿ ನೀರಿನ ಡ್ರಮ್ ನಲ್ಲಿ ಸಂಗ್ರಹಿಸಿಟ್ಟಿದ್ದಳು ಎಂಬ ಸತ್ಯ ಬಹಿರಂಗವಾಗಿದೆ.
ಮೀರತ್‌ನಲ್ಲಿ ಮಂಗಳವಾರ ಪತ್ತೆಯಾದ ಕೊಲೆ ಪ್ರಕರಣವೊಂದರ ಬೆನ್ನುಹತ್ತಿದ ಪೊಲೀಸರಿಗೆ ಸ್ಫೋಟಕ ಮಾಹಿತಿಗಳು ಲಭ್ಯವಾಗುತ್ತಿದ್ದು, ಕೊಲೆಯಾದ ಸೌರಬ್ ರಜಪೂತ್ ಪತ್ನಿ ತನ್ನ ಗಂಡನ ಶವವನ್ನು ನೀರಿನ ಡ್ರಮ್‌ನಲ್ಲಿ ತುಂಡುತುಂಡಾಗಿ ಕತ್ತರಿಸಿ ಸಂಗ್ರಹಿಸಿಟ್ಟಿದ್ದಳು. ಈ ಕೊಲೆ ಮತ್ತು ಶವ ಕತ್ತರಿಸಲು ಸಹಕರಿಸಿದ ಸಾಹಿಲ್ ಎಂಬ ಯುವಕನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಈ ವೇಳೆ ಸಾಹಿಲ್ ತನ್ನ ತಾಯಿ ಸ್ವರ್ಗದಿಂದ ನನಗೆ ಆತನನ್ನು ಕೊಲ್ಲುವಂತೆ ಸಂದೇಶ ಕಳುಹಿಸಿದಳು. ಅದಕ್ಕಾಗಿ ನಾನವನನ್ನು ಕೊಂದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಆತನ ಈ ಹುಚ್ಚು ಹೇಳಿಕೆಯ ಬೆನ್ನುಹತ್ತಿದ ಪೊಲೀಸರಿಗೆ ಪತ್ನಿ ಮುಸ್ಕಾನ್ ಮಾಡಿದ್ದ ಸಂಚು ಅಚ್ಚರಿ ತರಿಸಿದೆ. ತಾಯಿ ಸಂದೇಶ ಕಳುಹಿಸುತ್ತಿದ್ದಾಳೆ ಎಂಬಂತೆ ಪ್ರಿಯಕರ ಸಾಹಿಲ್‌ಗೆ ಮುಸ್ಕಾನ್ ಸಂದೇಶ ಕಳುಹಿಸುತ್ತಿದ್ದಳು. ಆ ಮೂಲಕ ತನ್ನ ಪತಿಯನ್ನು ಕೊಲ್ಲಲು ಆಕೆ ಆತನನ್ನು ಪ್ರೇರಿಪಿಸಿದ್ದಳು ಎನ್ನಲಾಗಿದೆ.

ಲಂಡನ್‌ನಲ್ಲಿದ್ದ ಸೌರಬ್ ಫೆ.24ರಂದು ವಾಪಸ್ಸಾಗಿದ್ದರು. ಈ ವೇಳೆ ಯೋಜನೆ ರೂಪಿಸಿದ್ದ ಮುಸ್ಕಾನ್ ಆತನ ಕೊಲೆಗೆ ಸಾಹಿಲ್‌ನ ಸಹಾಯ ಕೇಳಿದ್ದಳು. ಮೊದಲಿಗೆ ಆತ ನಿರಾಕರಿಸಿದಾಗ, ಆತನಿಗೆ ಮತ್ತೊಂದು ಸ್ನಾಪ್‌ಶಾಟ್ ಅಕೌಂಟ್ ಮೂಲಕ ಆತನ ತಾಯಿ ಸ್ವರ್ಗದಿಂದ ಸಂವಹನ ನಡೆಸುತ್ತಿದ್ದಾಳೆ ಎಂಬಂತೆ ನಂಬಿಸಿದಳು. ಇತ್ತೀಚೆಗಷ್ಟೇ ಸಾವನ್ನಪ್ಪಿದ್ದ ಸಾಹಿಲ್ ತಾಯಿಯ ಬಗ್ಗೆ ಆತನಿಗಿದ್ದ ಪ್ರೀತಿಯನ್ನು ಬಳಸಿಕೊಂಡ ಮುಸ್ಕಾನ್, ಆತನಿಗೆ ತಾಯಿಂದಲೇ ಕೊಲೆ ಮಾಡಲು ಆದೇಶ ಬರುತ್ತಿದೆ ಎಂಬಂತೆ ನಂಬಿದಿ ಕೆಲಸ ಸಾಧಿಸಿಕೊಂಡಳು.
ಗಲ್ಲು ಶಿಕ್ಷೆ ವಿಧಿಸಲು ಒತ್ತಾಯ : ತನ್ನ ಗಂಡನನ್ನು ಕೊಂದ ಆರೋಪದಲ್ಲಿ ಬಂಧಿತರಾಗಿರುವ ಮುಸ್ಕಾನ್ ಮತ್ತು ಆತನ ಪ್ರಿಯಕರನಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಸ್ವತಃ ಮುಸ್ಕಾನ್ ತಂದೆ ತಾಯಿ ಒತ್ತಾಯಿಸಿದ್ದಾರೆ. ನಮ್ಮ ಅಳಿಯ ಒಳ್ಳೆಯ ಮನುಷ್ಯನಾಗಿದ್ದು, ಆತನ ಕೊಲೆ ಮಾಡಿದ ಮಗಳನ್ನು ಯಾವುದೇ ಕಾರಣಕ್ಕೂ ಬಿಡಬೇಡಿ. ಆಕೆಗೆ ಗಲ್ಲು ಶಿಕ್ಷೆ ವಿಧಿಸಿ ಎಂದು ಪೋಷಕರು ಒತ್ತಾಯಿಸಿದ್ದಾರೆ. ತಮ್ಮ ಮಗಳು ಮಾಡಿದ ಕೃತ್ಯವನ್ನು ಮುಂದೆ ಯಾರೂ ಮಾಡಬಾರದು, ಅಂತಹ ಶಿಕ್ಷೆಯನ್ನು ನ್ಯಾಯಾಲಯ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ.