ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಹನಿಟ್ರ್ಯಾಪ್ ಸದ್ದು ಮಾಡಿದೆ. ಹಿಂದಿನ ಬಿಜೆಪಿ ಸರ್ಕಾರದ ಜಲಸಂಪನ್ಮೂಲ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಹನಿಟ್ರ್ಯಾಪ್ ಕೇಸ್ ನಲ್ಲಿ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದು ಸಚಿವ ಸ್ಥಾನಕ್ಕೆ ಬಲವಂತವಾಗಿ ರಾಜೀನಾಮೆ ನೀಡಬೇಕಾಯಿತು.
ಇದೀಗ ಕಾಂಗ್ರೆಸ್ ಸರ್ಕಾರದ ಹಿರಿಯ ಸಚಿವ ಕೆ.ಎನ್ ರಾಜಣ್ಣ ಅವರನ್ನು ಸಹ ಇದೇ ರೀತಿ ಹನಿಟ್ರ್ಯಾಪ್ ಬಲೆಗೆ ಬೀಳಿಸುವ ಯತ್ನ ನಡೆದಿದೆ. ಈ ಬಗ್ಗೆ ಸಚಿವ ಕೆ.ಎನ್ ರಾಜಣ್ಣ ಅವರೇ ಇಂದು ಈ ರಹಸ್ಯವನ್ನು ಸದನದಲ್ಲಿ ಬಹಿರಂಗಪಡಿಸಿದ್ದು, ಭಾರೀ ಸಂಚಲನಕ್ಕೆ ಕಾರಣವಾಗಿದೆ.
ಸದನದಲ್ಲಿ ಸಚಿವ ಕೆ.ಎನ್ ರಾಜಣ್ಣ ಹೇಳಿದ್ದಿಷ್ಟು… “ಸಾರ್ವಜನಿಕ ಜೀವನದಲ್ಲಿ ಹೀಗಾಗಬಾರದು. ಅವರು ಯಾರೇ ಇರಲಿ ಬಹಿರಂಗ ಆಗಲಿ. ವಾಸ್ತವ ಏನು? ಎಂಬುದು ಜನರಿಗೆ ಗೊತ್ತಾಗಬೇಕು. ಇದರ ತನಿಖೆಯನ್ನ ಮಾಡಿಸಬೇಕು ಎಂದು ಗೃಹ ಮಂತ್ರಿಗಳಿಗೆ ನಾನು ಒತ್ತಾಯಿಸುತ್ತೇನೆ. ಇದರಲ್ಲಿ ಯಾರೆಲ್ಲಾ ಇದ್ದಾರೆ. ಇದರ ಪ್ರೊಡ್ಯೂಸರ್ ಯಾರು? ಎಲ್ಲಾ ತನಿಖೆ ಮೂಲಕ ಹೊರಗೆ ಬರಬೇಕು. ಇದೊಂದು ಪಿಡುಗು, ಸಾರ್ವಜನಿಕವಾಗಿ ಬಹಿರಂಗವಾಗಬೇಕು. ನನ್ನ ಮೇಲೆ ಕೂಡ ಅಟೆಂಪ್ಟ್ ಮಾಡಿದ ಬಗ್ಗೆ ಪುರಾವೆ ಇವೆ. ಈ ಬಗ್ಗೆ ಲಿಖಿತ ದೂರು ನೀಡುತ್ತೇನೆ ಎಂದರು.
ಇನ್ನು ಸಚಿವ ಕೆ.ಎನ್ ರಾಜಣ್ಣ ಅವರ ಹನಿಟ್ರ್ಯಾಪ್ ಬಗ್ಗೆ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಪರಮೇಶ್ವರ್, ಸಚಿವ ಕೆ.ಎನ್ ರಾಜಣ್ಣ ಅವರು ಹನಿಟ್ರ್ಯಾಪ್ ಯತ್ನದ ಬಗ್ಗೆ ಲಿಖಿತ ದೂರು ನೀಡುವುದಾಗಿ ಹೇಳಿದ್ದಾರೆ. ಲಿಖಿತ ದೂರು ನೀಡಿದರೆ ಉನ್ನತ ಮಟ್ಟದ ತನಿಖೆಗೆ ಆದೇಶಿಸುವೆ ಎಂದು ಸ್ಪಷ್ಟಪಡಿಸಿದರು.
ಇದಕ್ಕೂ ಮುನ್ನ ಇಂದು ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ‘ನಮ್ಮ ರಾಜ್ಯದ ಕಾಂಗ್ರೆಸ್ ಸರ್ಕಾರದ ಇಬ್ಬರು ಸಚಿವರನ್ನು ಈಗಾಗಲೇ ಹನಿಟ್ರ್ಯಾಪ್ ಖೆಡ್ಡಾಗೆ ಬೀಳಿಸುವ ಸಂಚು ನಡೆದಿತ್ತು. ಇದೀಗ 3ನೇ ಸಚಿವರನ್ನು ಸಹ ಹನಿಟ್ರ್ಯಾಪ್ ನಲ್ಲಿ ಬೀಳಿಸುವ ಯತ್ನ ನಡೆದಿದೆ ಎಂದು ಸ್ಫೋಟಕ ರಹಸ್ಯ ಬಹಿರಂಗಪಡಿಸಿದ್ದರು.