ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ಉತ್ತರ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಇಂದು ಬೆಳಿಗ್ಗೆ ಹಣ ಕದಿಯಲು ಬಂದ ಇಬ್ಬರು ವ್ಯಕ್ತಿಗಳನ್ನು ಕಂದಾಯ ಇಲಾಖೆ ಸಿಬ್ಬಂದಿ ಹಿಡಿದು ಪೊಲೀಸರಿಗೆ ಒಪ್ಪಿಸಿದರು.
ಕಳೆದ ಎರಡು ದಿನಗಳಿಂದ ಮಹಿಳಾ ಸಿಬ್ಬಂದಿಯ ವ್ಯಾನಿಟಿ ಬ್ಯಾಗ್ ನಿಂದ ಸದರಿ ವ್ಯಕ್ತಿಗಳು ಹಣ ಕದಿಯುತ್ತಿದ್ದರು ಎಂದು ಏಸಿ ಕಚೇರಿ ಗುಮಾಸ್ತ ಅಶ್ವತ್ಥ್ ಎಂಬುವವರು ದೂರಿನಲ್ಲಿ ತಿಳಿಸಿದ್ದಾರೆ. ಊಟದ ಸಮಯದಲ್ಲಿ ಬ್ಯಾಗ್ ತಮ್ಮ ಟೇಬಲ್ ಬಳಿ ಇಟ್ಟು ಊಟದ ಹಾಲ್ ಗೆ ಸಿಬ್ಬಂದಿ ತೆರಳಿದಾಗ ಯಾರೂ ಇಲ್ಲದನ್ನು ಗಮನಿಸಿ ಪ್ರತೀ ಟೇಬಲ್ ಬಳಿ ತೆರಳಿ ಬ್ಯಾಗ್ ತೆರೆದು ಹಣ ಎಗರಿಸುತ್ತಿದ್ದುದು ಕಚೇರಿಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ದಾಖಲಾಗಿತ್ತು.
ಹಣ ಕಳೆದುಕೊಂಡ ಸಿಬ್ಬಂದಿಗೆ ಅಕ್ಕಪಕ್ಕದಲ್ಲಿ ಕೂರುವ ಸಿಬ್ಬಂದಿ ಮತ್ತು ಕಚೇರಿಗೆ ಕೆಲಸದ ನಿಮಿತ್ತ ಬರುವವರ ಮೇಲೆ ಸಹಜವಾಗಿ ಅನುಮಾನ ಉಂಟಾಗಿತ್ತು. ನಂತರ ಕಚೇರಿಯಲ್ಲಿ ಅಳವಡಿಸಲಾದ ಸಿಸಿ ಟಿವಿ ಪರಿಶೀಲಿಸಿದಾಗ ಕ್ಯಾಮೆರಾದಲ್ಲಿ ದಾಖಲಾದ ವಿಡಿಯೋಗಳನ್ನು ಕಳ್ಳರ ಚಹರೆ ಪತ್ತೆಯಾಗಿತ್ತು.
ಇಂದು ಅದೇ ವ್ಯಕ್ತಿಗಳು ಬಂದು ರೈತರಂತೆ ಓಡಾಡುತ್ತಿದ್ದಾಗ ಸಿಬ್ಬಂದಿ ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ.
ಅಲಸೂರು ಗೇಟ್ ಪೊಲೀಸರು ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.