ಬೆಂಗಳೂರು: ಬೆಳಗಾವಿ ಜಿಲ್ಲೆಯ ಗಡಿಭಾಗದಲ್ಲಿ ಮರಾಠಿಗರ ದಬ್ಬಾಳಿಕೆ ಖಂಡಿಸಿ ಕನ್ನಡ ಪರ ಸಂಘಟನೆಗಳು ಇಂದು ಕರೆಕೊಟ್ಟಿರುವ ‘ಕರ್ನಾಟಕ ಬಂದ್’ ರಾಜ್ಯಾದ್ಯಂತ ನಡೆಯುತ್ತಿದೆ.
ಈ ನಡುವೆ ಬೆಂಗಳೂರಿನ ಸಂಜಯನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ವಾಟಾಳ್ ನಾಗರಾಜ್ ‘ಇಂದು ಮರಾಠಿಗರ ಮತ್ತು ಎಂಇಎಸ್, ಶಿವಸೇನೆ ಮುಂತಾದ ಕನ್ನಡ ದ್ರೋಹಿ ಹೊರರಾಜ್ಯಗಳ ಸಂಘಟನೆಗಳು, ರಾಜಕೀಯ ಪಕ್ಷಗಳು ಬೆಳಗಾವಿ ಜಿಲ್ಲೆಯ ಗಡಿಭಾಗದಲ್ಲಿ ಅಟ್ಟಹಾಸ ಮೆರೆಯುತ್ತಿವೆ. ಕನ್ನಡ ಮಾತನಾಡಿದ ಎಂದು ನಮ್ಮ ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್ ಮೇಲೆ ಯದ್ವತದ್ವಾ ಹಲ್ಲೆ ಮಾಡಿದ್ದಾರೆ. ಈ ದಬ್ಬಾಳಿಕೆ ಖಂಡಿಸಿ ಇಂದು ಕರೆ ಕೊಟ್ಟಿರುವ ಕರ್ನಾಟಕ ಬಂದ್ ಬೆಳಗ್ಗೆ ಯಶಸ್ವಿಯಾಗಿದೆ.
ಆದರೆ ಬೆಂಗಳೂರಿನಲ್ಲಿ ಹೋಟೆಲ್ ಗಳನ್ನು, ಅಂಗಡಿಗಳನ್ನು ಮುಚ್ಚಬೇಡಿ ಎಂದು ಬೆಂಗಳೂರು ಪೊಲೀಸ್ ಕಮೀಷನರ್ ದಯಾನಂದ್ ಹೆದರಿಸಿ ನಮ್ಮ ಬಂದ್ ಹತ್ತಿಕ್ಕುವ ಕೆಲಸ ಮಾಡಿದ್ದಾರೆ. ಆದರೆ ಹೋಟೆಲ್ ಮಾಲೀಕರು ಮತ್ತು ಅಂಗಡಿಗಳ ಮಾಲೀಕರು ಸ್ವತಃ ಕರ್ನಾಟಕ ಬಂದ್ ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ ನನಗೆ ಬಂದ ಮಾಹಿತಿ ಪ್ರಕಾರ ರಾಜ್ಯಾದ್ಯಂತ ಕರ್ನಾಟಕ ಬಂದ್ ಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಪೊಲೀಸರು ಎಷ್ಟೇ ದಬ್ಬಾಳಿಕೆ ಮಾಡಿದರೂ ನಮ್ಮ ಕರ್ನಾಟಕ ಬಂದ್ ಯಶಸ್ವಿಯಾಗುತ್ತದೆ.
ಇನ್ನು ರಾಜ್ಯಸರ್ಕಾರದವರು ಕೇವಲ ಕರ್ನಾಟಕ ಬಂದ್ ಗೆ ನೈತಿಕ ಬೆಂಬಲ ಇದೆ ಅಂತ ನಾಟಕವಾಡ್ತಾ ಇದಾರೆ. ಆದರೆ ಕಳೆದ ರಾತ್ರಿ ಬೆಂಗಳೂರಿನಲ್ಲಿ ಪೊಲೀಸರು ನಮ್ಮ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರನ್ನು ಸಿಕ್ಕಸಿಕ್ಕ ಕಡೆ ಬಂಧಿಸಿ ಇಂದು ಹೋರಾಟ ಮಾಡದಂತೆ ಬಂಧಿಸಿದ್ದಾರೆ. ಇಷ್ಟಾದರೂ ನಮ್ಮ ಕರ್ನಾಟಕ ಬಂದ್ ಇಂದು ಯಶಸ್ವಿಯಾಗಿದೆ. ಪೊಲೀಸರು ಎಷ್ಟೇ ದಬ್ಬಾಳಿಕೆ ನಡೆಸಿದರೂ ನಮ್ಮ ಕರ್ನಾಟಕ ಬಂದ್ ನಿಲ್ಲಲ್ಲ ಎಂದು ಸವಾಲು ಹಾಕಿದರು.