ಕೊಲ್ಕತ್ತಾ: ಮೊದಲನೇ ಪಂದ್ಯ ದೇವ್ರಿಗೆ ಅರ್ಪಣೆ ಅನ್ನೋ ಆರ್ ಸಿಬಿ ಹಣೆಬರಹಕ್ಕೆ ಹೊಸ ಅಧ್ಯಾಯದಲ್ಲಿ ಫುಲ್ ಸ್ಟಾಪ್ ಇಟ್ಟಂತೆ ಕಾಣುತ್ತಿದೆ. ಮೊದಲ ಪಂದ್ಯವನ್ನು ಅಧಿಕಾರಯುತವಾಗಿ ಗೆದ್ದು ಬೀಗಿದ ಬೆಂಗಳೂರು ತಂಡ IPL 2025 ರಲ್ಲಿ ಶುಭಾರಂಭ ಮಾಡಿದೆ.
ಮಳೆಯ ಆತಂಕದ ನಡುವೆಯೂ ಕೊಲ್ಕತ್ತಾದಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಟಾಸ್ ಗೆದ್ದ ಆರ್ ಸಿಬಿ ತಂಡ, ಕೊಲ್ಕಾತ್ತಾವನ್ನು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಸೌತ್ ಆಫ್ರಿಕಾದ ಸ್ಫೋಟಕ ಬ್ಯಾಟರ್ ಕ್ವಿಂಡನ್ ಡಿ ಕಾಕ್ ಅವರನ್ನು ಬೇಗನೆ ಔಟ್ ಮಾಡಿದರೂ, ನಾಯಕ ಅಜೀಕ್ಯಾ ರಹಾನೆ ಮತ್ತು ಸುನೀಲ್ ನರೇನ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಕೊಲ್ಕತ್ತಾ ಉತ್ತಮ ಮೊತ್ತ ಕಲೆಹಾಕಿತು.
ಎರಡನೆ ವಿಕೆಟ್ ನಲ್ಲಿ ಶತಕದ ಜೊತೆಯಾಟ ಬಂದರೂ ಮುಂದಿನ ಸ್ಫೋಟಕ ಬ್ಯಾಟರ್ ಗಳನ್ನು ಆರ್‌ಸಿಬಿ ಬೌಲರ್ ಗಳು ಹೆಡಮುರಿ ಕಟ್ಟಿದರು. ರಿಂಕು ಸಿಂಗ್, ವೆಂಕಟೇಶ್ ಅಯ್ಯರ್ ಹಾಗೂ ಆಂಡ್ರ್ಯೂ ರಸೆಲ್ ಅವರು ಲಯಕ್ಕೆ ಮರಳುವ ಮೊದಲೇ ಪೆವಿಲಿಯನ್ ಸೇರುವಂತೆ ಮಾಡಿದರು. ಇದರ ಪರಿಣಾಮವಾಗಿ ಕೊಲ್ಕತ್ತಾ 8 ವಿಕೆಟ್ ನಷ್ಟಕ್ಕೆ174 ರನ್ ಗಳಿಸಿತು.
ಆರ್.ಸಿಬಿ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಕ್ರುನಾಲ್ ಪಾಂಡ್ಯ ಮೂರು ವಿಕೆಟ್ ಪಡೆದರೆ, ಹ್ಯಾಸೆಲ್ವುಡ್ ಎರಡು ವಿಕೆಟ್ ಪಡೆದು ಮಿಂಚಿದರು. ಯಶ್ ದಯಾಳ್, ರಸಿಕ್ ಸಲಾಮ್ ಮತ್ತು ಸುಯಾಶ್ ಶರ್ಮಾ ತಲಾ ಒಂದು ವಿಕೆಟ್ ಪಡೆದುಕೊಂಡರು.
174 ರನ್ ಗಳ ಗುರಿಯನ್ನು ಬೆನ್ನಟ್ಟಿದ್ದ ಆರ್ ಸಿಬಿಗೆ ವಿರಾಟ್ ಕೋಹ್ಲಿ ಮತ್ತು ಫಿಲ್ ಸಾಲ್ಟ್ ಅತ್ಯುತ್ತಮ ಆರಂಭ ನೀಡಿದರು. ಸಾಲ್ಟ್ ಅಬ್ಬರಿಸಿ ಅರ್ಧಶತಕ ಗಳಿಸಿ ಔಟಾದರೆ, ವಿರಾಟ್ ಕೋಹ್ಲಿ ಔಟಾಗದೆ ಅರ್ಧಶತಕ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಅಂತಿಮವಾಗಿ ಆರ್.ಸಿಬಿ ತಂಡ 3 ವಿಕೆಟ್ ಕಳೆದುಕೊಂಡು ಗುರಿಮುಟ್ಟಿತು.
ಸಾಲ್ಟ್ 54 ರನ್ ಗಳಿಸಿ ಔಟಾದರೆ, ಕೋಹ್ಲಿ ಅಜೇಯ 59 ರನ್ ಗಳಿಸಿದರು. ಕರ್ನಾಟಕದ ದೇವದತ್ ಪಡಿಕಲ್ 10 ರಮ್ ಗಳಿಸಿದರೆ, ನಾಯಕ ರಜತ್ ಪಟೀದಾರ್ 34 ರನ್ ಗಳ ಜವಾಬ್ದಾರಿಯುತ ಇನ್ನಿಂಗ್ಸ್ ಕಟ್ಟಿದರು. ಕೊನೆಯ ಹಂತದಲ್ಲಿ ಲಿವಿಂಗ್ಸ್ಟನ್ ಸ್ಫೋಟಕ 15 ರನ್ ಸಿಡಿಸಿ ಗೆಲುವಿನ ಔಪಚಾರಿಕತೆ ಮುಗಿಸಿದರು.
4 ಓವರ್ ಗಳಲ್ಲಿ 29 ರನ್ ನೀಡಿ 3 ವಿಕೆಟ್ ಪಡೆದ ಕ್ರುನಾಲ್ ಪಾಂಡ್ಯ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರೆ, ಆರ್.ಸಿಬಿ 2025 ರ ಅಭಿಯಾನವನ್ನು ಗೆಲುವಿನೊಂದಿಗೆ ಆರಂಭಿಸಿದ್ದು, ಅಭಿಮಾನಿಗಳ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.