ಕೇತಗಾನಹಳ್ಳಿ ಒತ್ತುವರಿ ತೆರವು ಕೇಸ್: ಸುಪ್ರೀಂಕೋರ್ಟ್ ನಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಹಿನ್ನಡೆ!

Share It

ನವದೆಹಲಿ : ಬಿಡದಿಯ ಕೇತಗಾನಹಳ್ಳಿ‌ ಬಳಿ ಸರ್ಕಾರಿ ಜಮೀನು ಒತ್ತುವರಿ ಪ್ರಕರಣ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ ಕುಮಾರಸ್ವಾಮಿಗೆ ಸಂಕಷ್ಟ ತಂದಿಟ್ಟಿದೆ. ಸಮಾಜ ಪರಿವರ್ತನಾ ಸಮುದಾಯದ ಎಸ್‌.ಆರ್‌.ಹಿರೇಮಠ ದಾಖಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಗೆ ತಡೆ ಕೋರಿ ಎಚ್.ಡಿ.ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು (ಮಾರ್ಚ್​ 28) ವಜಾಗೊಳಿಸಿದೆ.

ಮತ್ತೊಂದೆಡೆ ಸುಪ್ರೀಂಕೋರ್ಟ್​​ನಲ್ಲಿ ನ್ಯಾಯಾಂಗ ಅರ್ಜಿ ವಿಚಾರಣೆ ಬಾಕಿ ಎಂದು ಕರ್ನಾಟಕ ಹೈಕೋರ್ಟ್​​ನಿಂದ ರಿಲೀಫ್​ ಪಡಿದುಕೊಂಡಿದ್ದರು. ಆದ್ರೆ, ಇದೀಗ ನ್ಯಾಯಾಂಗ ನಿಂದನೆ ಅರ್ಜಿಗೆ ತಡೆಕೋರಲು ​ಸುಪ್ರೀಂಕೋರ್ಟ್ ನಿರಾಕರಿಸಿದೆ. ಮತ್ತೊಂದೆಡೆ 6 ಎಕರೆ ಒತ್ತುವರಿ ಸಂಬಂಧ ಸ್ಥಳೀಯ ತಹಸೀಲ್ದಾರ್‌ ನೀಡಿರುವ ನೋಟಿಸ್‌ ಪ್ರಶ್ನಿಸಿ ಎಚ್‌.ಡಿ. ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿಯು ಸೋಮವಾರ ನ್ಯಾ.ಎನ್‌.ಎಸ್‌. ಸಂಜಯಗೌಡ ಅವರಿದ್ದ ಏಕಸದಸ್ಯ ಪೀಠದ ಮುಂದೆ ವಿಚಾರಣೆ ನಡೆದಿತ್ತು.

ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಉದಯ್‌ ಹೊಳ್ಳ, ಅಧಿಕಾರ ವ್ಯಾಪ್ತಿ ಇಲ್ಲದಿದ್ದರೂ ತಹಸೀಲ್ದಾರ್‌ ಅರ್ಜಿದಾರರಿಗೆ ನೋಟಿಸ್‌ ನೀಡಿದ್ದಾರೆ. 1985 ರಲ್ಲಿಯೇ ಕ್ರಯಪತ್ರವಾಗಿರುವ ಜಮೀನಿಗೆ ಈಗ ನೋಟಿಸ್‌ ನೀಡಲಾಗಿದೆ. ನ್ಯಾಯಾಂಗ ನಿಂದನೆ ಪ್ರಕರಣವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಹಾಗಾಗಿ, ತಹಸೀಲ್ದಾರ್‌ ನೋಟಿಸ್‌ಗೆ ತಡೆ ನೀಡಬೇಕು ಎಂದು ಕೋರಿದ್ದರು.

ಹೀಗಾಗಿ ಹೈಕೋರ್ಟ್​ , ಮಾರ್ಚ್ 27 ರವರೆಗೂ ಅರ್ಜಿದಾರರ ವಿರುದ್ಧ ಯಾವುದೇ ವಿಧವಾದ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ತಿಳಿಸಿ ವಿಚಾರಣೆಯನ್ನು ಮಾರ್ಚ್ 27ಕ್ಕೆ ನಿಗದಿಪಡಿಸಿತ್ತು. ಆದ್ರೆ, ಇದೀಗ ಸುಪ್ರೀಂಕೋರ್ಟ್​ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿಗೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.

ಎಚ್‌.ಡಿ. ಕುಮಾರಸ್ವಾಮಿ ಮತ್ತು ಅವರ ಸಂಬಂಧಿ ಡಿ.ಸಿ.ತಮ್ಮಣ್ಣ ಮತ್ತಿತರರು 2014ರಲ್ಲಿ ರಾಮನಗರದ ಬಿಡಿದಿ ಬಳಿಯ ಕೇತಗಾನಹಳ್ಳಿಯಲ್ಲಿ ವಿವಿಧ 8 ಸರ್ವೆ ನಂಬರ್​ಗಳ ಒಟ್ಟು 14 ಎಕರೆ ಭೂಮಿ ಒತ್ತುವರಿ ಮಾಡಿದ್ದಾರೆಂಬ ಆರೋಪವಿದೆ. ಈ ಸಂಬಂಧ ಲೋಕಾಯುಕ್ತ ನೀಡಿದ್ದ ವರದಿ ಜಾರಿಗೊಳಿಸಲು ಹೈಕೋರ್ಟ್‌ ಆದೇಶ ನೀಡಿದ್ದರೂ ಅದನ್ನು ಪಾಲನೆ ಮಾಡಿಲ್ಲ ಎಂದು ಆರೋಪಿಸಿ ಸಮಾಜ ಪರಿವರ್ತನಾ ಸಮುದಾಯದ ಎಸ್‌.ಆರ್‌.ಹಿರೇಮಠ ಅವರು ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದ್ದರು.

ಈ ಅರ್ಜಿ ಪರಿಶೀಲಿಸಿದ್ದ ಹೈಕೋರ್ಟ್‌ ವಿಭಾಗೀಯ ಪೀಠ ಭೂಮಿ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳದ ಅಧಿಕಾರಿಗಳನ್ನು ಜೈಲಿಗೆ ಕಳುಹಿಸುವುದಾಗಿ ಎಚ್ಚರಿಕೆ ನೀಡಿತ್ತು. ಆನಂತರ ಜಮೀನಿನ ಸರ್ವೆ ಕಾರ್ಯ ನಡೆಸಿದ ಸ್ಥಳೀಯ ತಹಸೀಲ್ದಾರ್‌, ಎಚ್‌.ಡಿ.ಕುಮಾರಸ್ವಾಮಿ ಮತ್ತಿತರರಿಗೆ ಕಾನೂನಿನ್ವಯ ನೋಟಿಸ್‌ ಜಾರಿಗೊಳಿಸಿದ್ದರು. ಅದನ್ನು ಪ್ರಶ್ನಿಸಿ ಎಚ್‌ಡಿಕೆ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದರು.

ಆದ್ರೆ, ಇದೀಗ ಸುಪ್ರೀಂಕೋರ್ಟ್​​ನಲ್ಲಿ ಕುಮಾರಸ್ವಾಮಿ ಅರ್ಜಿ ವಜಾಗೊಂಡಿದೆ. ಹೀಗಾಗಿ 6 ಎಕರೆ ಒತ್ತುವರಿ ಸಂಬಂಧ ಸ್ಥಳೀಯ ತಹಸೀಲ್ದಾರ್‌ ನೀಡಿರುವ ನೋಟಿಸ್‌ ಪ್ರಶ್ನಿಸಿ ಎಚ್‌.ಡಿ. ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿ ಸಂಬಂಧ ಕರ್ನಾಟಕ ಹೈಕೋರ್ಟ್​​ ಯಾವ ತೀರ್ಪು ನೀಡುತ್ತೆ? ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.


Share It

You May Have Missed

You cannot copy content of this page