ಬೆಂಗಳೂರು: ಚೆನ್ನಾಗಿಯೇ ಇದ್ದ ಗಂಡ ಹೆಂಡತಿ ಜಗಳ ಮಾಡಿಕೊಂಡು, ಪತ್ನಿಯ ಕೊಲೆ ಮಾಡಿ ಸೂಟ್ ಕೇಸ್‌ನಲ್ಲಿ ತುಂಬುವಂತೆ ಮಾಡಿದ್ದು ಮರಾಠಿ ಚಿತ್ರದ ತಂದೆ-ಮಗನ ಸಂಬಂಧದ ಹಾಡು ಎಂದು ಗೊತ್ತಾಗಿದೆ.
ಮಾ. 26 ರಂದು ಕನಕಪುರ ರಸ್ತೆ ಕಮ್ಮನಹಳ್ಳಿಯಲ್ಲಿ ನಡೆದಿದ್ದ ಮಹಿಳೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಾರಸ್ಯಕರ ಸನ್ನಿವೇಶವೊಂದು ಪೊಲೀಸರ ತನಿಖೆ ವೇಳೆ ಬಯಲಾಗಿದ್ದು, ತನ್ನ ತಂದೆ ಹಾಗೂ ಕುಟುಂಬಸ್ಥರ ಬಗ್ಗೆ ಗೇಲಿ ಮಾಡಿದ್ದಕ್ಕೆ ಮಡದಿಯನ್ನು ಕೊಂದಿದ್ದಾಗಿ ಆರೋಪಿ ರಾಕೇಶ್ ಖೇಡೇಕರ್ ಹೇಳಿಕೊಂಡಿದ್ದಾನೆ.
ಗೌರಿ ಸಾಂಬ್ರೇಕರ್, ಆಗಾಗ ರಾಕೇಶ್ ಕುಟುಂಬದ ಕುರಿತು ಅವಹೇಳನ ಮಾಡುತ್ತಿದ್ದಳು. ಜತೆಗೆ ಬೆಂಗಳೂರು ತೊರೆದು ಮುಂಬೈಗೆ ಹೋಗಿ ನೆಲಸುವಂತೆ ಪೀಡಿಸುತ್ತಿದ್ದಳು ಎನ್ನಲಾಗಿದೆ. ಜತೆಗೆ ರಾಕೇಶ್ ತಂದೆ, ತಾಯಿ ಮತ್ತು ಆತನ ತಂಗಿಯ ಬಗ್ಗೆ ಕೇವಲವಾಗಿ ಮಾತನಾಡುವುದನ್ನು ಹೆಚ್ಚಾಗಿ ಮಾಡುತ್ತಿದ್ದಳು ಎಂದು ಹೇಳಿಕೊಂಡಿದ್ದಾನೆ.
ಕೊಲೆಯಾದ ದಿನ ಇಬ್ಬರು ಸಂಜೆ ವಾಕಿಂಗ್ ಹೋಗಿಬಂದಿದ್ದರು. ಬರುವಾಗಲೇ ಮಧ್ಯ ಮತ್ತು ತಿಂಡಿ ತಂದಿದ್ದು, ರಾಕೇಶ್ ಮಧ್ಯಸೇವನೆ ಮಾಡುವಾಗ ಗೌರಿ, ಆತನಿಗೆ ತಿಂಡಿ ಸರಬರಾಜು ಮಾಡುತ್ತಿದ್ದಳು. ಎಂದಿನAತೆ ಅಂತ್ಯಕ್ಷರಿ ಹಾಡಿಕೊಂಡು ಇಬ್ಬರು ಕಾಲ ಕಳೆಯುತ್ತಿದ್ದಾಗ ನಡೆದ ಘಟನೆಯೊಂದು ಇವರಿಬ್ಬರ ಜೀವನವನ್ನು ಹಾಳುಗೆಡವಿದೆ.
ಗೌರಿ ಹೇಳಿದ ತಂದೆಯ ಬಗೆಗಿನ ಹಾಡಿನಲ್ಲಿದ್ದ ವ್ಯಂಗ್ಯ ಮತ್ತು ಆಕೆ ಈ ಹಾಡು ಹೇಳುವಾಗ ಆತನ ಮುಖದ ಮೇಲೆ ಬಂದು, ಉಸಿರು ಊದಿ ನಡೆದುಕೊಂಡು ಗೇಲಿ ಮಾಡಿದ ರೀತಿ ಆತನನ್ನು ಕೆರಳಿಸಿದೆ. ಆತ ಆಕೆಯನ್ನು ಜೋರಾಗಿ ತಳ್ಳಿದ್ದಾನೆ. ಆಗ ಅಡುಗೆ ಮನೆಗೆ ಹೋಗಿ ಬಿದ್ದ ಗೌರಿ, ಅಲ್ಲಿಂದ ಚಾಕು ಎತ್ತಿ ರಾಕೇಶ್ ಕಡೆಗೆ ಬಿಸಾಕಿದ್ದಾಳೆ. ಅದೇ ಚಾಕುವಿನಿಂದ ಆಕೆಯ ಕುತ್ತಿಗೆಗೆ ಚುಚ್ಚಿ ರಾಕೇಶ್ ಕೊಲೆ ಮಾಡಿದ ಎನ್ನಲಾಗಿದೆ.
ಆಕೆ ರಕ್ತದ ಮಡುವಿನಲ್ಲಿ ಬಿದ್ದು ನರಳಾಡುವಾಗ ಅವಳ ಪಕ್ಕ ಕುಳಿತ ರಾಕೇಶ್, ತನ್ನ ಕುಟುಂಬದ ಕುರಿತು ಆಕೆ ಮಾಡಿದ ಗೇಲಿಯಿಂದ ತನಗಾದ ನೋವುಗಳನ್ನು ಆಕೆಯ ಜತೆಗೆ ಮಾತನ್ನಾಡುತ್ತಲೇ, ಆಕೆಗೆ ಮತ್ತೇ ಮತ್ತೇ ಚುಚ್ಚಿದ್ದಾನೆ. ಅನಂತರ ಅವಳ ಪ್ರಾಣ ಹೋಗಿದ್ದು, ಆಕೆಯೇ ಖಾಲಿ ಮಾಡಿಟ್ಟಿದ್ದ ಸೂಟ್‌ಕೇಸ್‌ನಲ್ಲಿ ಶವವನ್ನು ತುಂಬಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ.
ಶವವನ್ನು ಹೊರಗೆ ಸಾಗಿಸುವ ಉದ್ದೇಶದಿಂದ ಸ್ನಾನದ ಮನೆಯಲ್ಲಿಟ್ಟು ಮನೆಯನ್ನೆಲ್ಲ ಸ್ವಚ್ಛಗೊಳಿಸಿದ್ದ ರಾಕೇಶ್, ಶವ ಸಾಗಾಟ ಮಾಡುವುದು ಕಷ್ಟವಾದಾಗ ಅಲ್ಲಿಂದ ಪರಾರಿಯಾಗುವ ಆಲೋಚನೆ ಮಾಡಿದ್ದಾನೆ. ಹೀಗಾಗಿ, ಮಹಾರಾಷ್ಟ್ರದ ಶಿರ್ವಾಲ್ ಕಡೆಗೆ ಹೋಗಿದ್ದು, ಪ್ರಕರಣ ಬೆಳಕಿಗೆ ಬಂದನಂತರ ಪೊಲೀಸರು ಬಂಧಿಸಿದ್ದರು.