ಅಡುಗೆ ಗ್ಯಾಸ್ ಬೆಲೆ 50 ರೂ. ಏರಿಕೆ!
ನವದೆಹಲಿ: ಕೇಂದ್ರ ಸರ್ಕಾರವು ಅಡುಗೆ ಅನಿಲದ ಬೆಲೆಯನ್ನು ಏಕಕಾಲಕ್ಕೆ ಸಿಲಿಂಡರ್‌ಗೆ ಬರೋಬ್ಬರಿ 50 ರೂ.ಗಳಷ್ಟು ಹೆಚ್ಚಿಸಿದೆ.
ಕೇಂದ್ರ ತೈಲ ಸಚಿವ ಹರ್ದೀಪ್ ಸಿಂಗ್ ಪುರಿ, ಸೋಮವಾರ (ಏ.7) ಅಡುಗೆ ಅನಿಲದ ಬೆಲೆಯನ್ನು ಹೆಚ್ಚಿಸಲಾಗಿದೆ ಎಂದು ಘೋಷಿಸಿದ್ದಾರೆ. ಬೆಲೆ ಏರಿಕೆ ಎಲ್ಲರಿಗೂ ಅನ್ವಯವಾಗಲಿದೆ. ಉಜ್ವಲ ಮತ್ತು ಸಾಮಾನ್ಯ ವರ್ಗದ ಗ್ರಾಹಕರಿಗೆ ಅನಿಲ ಬೆಲೆಯನ್ನು ಹೆಚ್ಚಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.
14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಸಾಮಾನ್ಯ ಬಳಕೆದಾರರಿಗೆ 803 ರೂಪಾಯಿಯಿಂದ 853 ರೂ.ಗಳಿಗೆ ಏರಿಕೆಯಾಗಲಿದೆ. ಇದೇ ವೇಳೆ ಉಜ್ವಲ ಯೋಜನೆಯಡಿ ಬಳಕೆದಾರರಿಗೆ ಪ್ರತಿ ಸಿಲಿಂಡರ್‌ಗೆ 503ರಿಂದ 553 ರೂ.ಗೆ ಏರಿಕೆಯಾಗಲಿದೆ.
ಕಳೆದ ವಾರವಷ್ಟೇ, ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು 41 ರೂ.ಗಳಷ್ಟು ಕಡಿಮೆ ಮಾಡಲಾಗಿತ್ತು. ಈ ಬೆಲೆ ಪರಿಷ್ಕರಣೆಯು ದಿನನಿತ್ಯ ಸಿಲಿಂಡರ್‌ಗಳನ್ನು ಬಳಸುವ ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು ಮತ್ತು ಇತರ ವಾಣಿಜ್ಯ ಸಂಸ್ಥೆಗಳ ಮೇಲೆ ಪರಿಣಾಮ ಬೀರಿತು.
ಇಂಧನದ ಮೇಲಿನ ಅಬಕಾರಿ ಸುಂಕ ಹೆಚ್ಚಳ!
ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕೂಡಾ ಹೆಚ್ಚಿಸಿದೆ. ಆದರೆ, ಈ ಹೆಚ್ಚಳವನ್ನು ಗ್ರಾಹಕರಿಗೆ ವರ್ಗಾಯಿಸಲಾಗುವುದಿಲ್ಲ ಎಂದು ಕೇಂದ್ರಸರ್ಕಾರ ಸ್ಪಷ್ಟಪಡಿಸಿದೆ. ಅದನ್ನು ತೈಲ ಮಾರುಕಟ್ಟೆ ಕಂಪನಿಗಳು ಭರಿಸುತ್ತವೆ ಎಂದು ತಿಳಿಸಿದೆ.
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ದರ ಹೆಚ್ಚಳದ ಬಗ್ಗೆ ಮಾತನಾಡುತ್ತಾ, “ನಾನು ದಾಖಲೆಯ ಬಗ್ಗೆ ಮುಂಚಿತವಾಗಿ ಸ್ಪಷ್ಟಪಡಿಸುತ್ತೇನೆ. ಈ ಏರಿಕೆ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಲಾಗುವುದಿಲ್ಲ” ಎಂದು ಕೇಂದ್ರ ತೈಲ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದರು.


