ಪಟೇಲ್ ಹೆಸರಲ್ಲೇ ಬಿಜೆಪಿ ವಿರುದ್ಧ ಹೋರಾಟಕ್ಕೆ ಕಾಂಗ್ರೆಸ್‌ ಸಜ್ಜು

Congress is ready to fight against BJP in the name of Patel!
Share It

ಅಹಮದಾಬಾದ್‌: ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಹೆಸರನ್ನು ಬಿಜೆಪಿ “ಹೈಜಾಕ್ ಮಾಡಿದೆ ಎಂದು ಆರೋಪಿಸುತ್ತಾ ಬಂದಿರುವ ಕಾಂಗ್ರೆಸ್ ಈಗ, ಅವರು “ನಮ್ಮ ಸರ್ದಾರ್ ಎಂದು ಹೇಳುವ ಮೂಲಕ ಗುಜರಾತ್ ಸೇರಿದಂತೆ ದೇಶಾದ್ಯಂತ ಸರ್ದಾರ್ ಪಟೇಲ್ ಅವರ ತತ್ವಗಳನ್ನು ಮುಂದಿಟ್ಟುಕೊಂಡು ಪಕ್ಷದ ಪುನರುತ್ಥಾನಕ್ಕೆ ಧುಮುಕಲು ತೀರ್ಮಾನಿಸಿದೆ.

ಅಹಮದಾಬಾದ್‌ನಲ್ಲಿ ಮಂಗಳವಾರ ನಡೆದ ಕಾಂಗ್ರೆಸ್‌ನ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ ) ಸಭೆಯಲ್ಲಿ ಈ ಬಗ್ಗೆ ಚರ್ಚೆ ನಿರ್ಧರಿಸಲಾಗಿದೆ. ದೇಶವನ್ನು ವಿಭಜಿಸುತ್ತಿರುವ ಶಕ್ತಿಗಳನ್ನು ಪಟೇಲರ ತತ್ವಗಳಿಂದಲೇ ಸೋಲಿಸಲು ತೀರ್ಮಾನಿಸಲಾಗಿದೆ.

ಅದರಂತೆ, ವರ್ಷವಿಡೀ ಸರ್ದಾರ್ ಪಟೇಲ್ ಅವರ 150ನೇ ಜನ್ಮ ದಿನವನ್ನು ಆಚರಿಸಲು, ಅವರ ಆದರ್ಶಗಳನ್ನು ಅನುಸರಿಸುತ್ತಾ ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್ ನಿರ್ಧರಿಸಿದೆ. ಹಿಂಸೆ, ಕೋಮುವಾದ ದೇಶವನ್ನು ಅಪಾಯದ ಅಂಚಿಗೆ ತಳ್ಳುತ್ತಿದೆ. ಹೀಗಾಗಿ, ಧಾರ್ಮಿಕ ಧ್ರುವೀಕರಣದ ವಿರುದ್ಧ ಹೋರಾಟಕ್ಕೂ ಕಾಂಗ್ರೆಸ್ ಮುಂದಾಗಿದೆ. ಈ ಹಿನ್ನೆಲೆಯಲ್ಲಿ “ನಮ್ಮ ಸ್ವಾತಂತ್ರ್ಯ ಚಳವಳಿಯ ಧ್ವಜಧಾರಿ-ನಮ್ಮ ಸರ್ದಾರ್ ವಲ್ಲಭಭಾಯಿ ಪಟೇಲ್’ ಎಂಬ ನಿರ್ಣಯ ಕೈಗೊಳ್ಳಲಾಗಿದೆ. ಅದರ ಅನ್ವಯ ಹೋರಾಟಕ್ಕೆ ತೀರ್ಮಾನಿಸಲಾಗಿದೆ.

ಸಭೆಯಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ಬಿಜೆಪಿ ಮತ್ತು ಆರ್‌ಎಸ್‌ಎಸ್ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲೇ ಇಲ್ಲ. ಆದರೆ, ಅವೆರಡೂ ರಾಷ್ಟ್ರೀಯ ನಾಯಕರ ವಿರುದ್ಧ ಅಪಪ್ರಚಾರ ನಡೆಸುವಲ್ಲಿ ನಿರತವಾಗಿವೆ’ ಎಂದು ಟೀಕಿಸಿದ್ದಾರೆ.

ಜವಾಹರ್‌ಲಾಲ್‌ ನೆಹರೂ ಮತ್ತು ಪಟೇಲ್ ನಡುವೆ ಭಿನ್ನಾಭಿಪ್ರಾಯ ಇದ್ದ ಕಾರಣದಿಂದ ಅವರ ನಡುವೆ ಉತ್ತಮ ಬಾಂಧವ್ಯ ಇರಲಿಲ್ಲ ಎಂಬ ಸುಳ್ಳನ್ನು ಖಂಡಿಸಲೂ ಸಿಡಬ್ಲೂéಸಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಪಕ್ಷದ ನಾಯಕ ಜೈರಾಂ ರಮೇಶ್ ತಿಳಿಸಿದ್ದಾರೆ. ಇದೇ ವೇಳೆ ಕಾಂಗ್ರೆಸ್‌ನಲ್ಲಿ ಸಂಘಟನಾತ್ಮಕವಾಗಿ ಹಲವು ಬದಲಾವಣೆಗಳನ್ನು ಮಾಡಲು ತೀರ್ಮಾನಿಸಲಾಗಿದೆ ಎಂದು ಸಂಸದ ಕೆ.ಸಿ.ವೇಣುಗೋಪಾಲ್ ತಿಳಿಸಿದ್ದಾರೆ.

ಇಂದು ಅಧಿವೇಶನ: ಅಹಮದಾಬಾದ್‌ನಲ್ಲಿ ಎಐಸಿಸಿ ಅಧಿವೇಶನ ಬುಧವಾರ ನಡೆಯಲಿದ್ದು, ಪ್ರಮುಖ ನಿರ್ಣಯಗಳನ್ನು ಕೈಗೊಳ್ಳುವ ಸಾಧ್ಯತೆಗಳಿವೆ. ಸಭೆಯಲ್ಲಿ ಪಾಲ್ಗೊಳ್ಳಲು ಕರ್ನಾಟಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡ ಗುಜರಾತ್‌ಗೆ ತೆರಳಿದ್ದಾರೆ.

ಬಿಸಿಲ ಝಳಕ್ಕೆ ಕುಸಿದು ಬಿದ್ದ ಮಾಜಿ ಸಚಿವ ಚಿದಂಬರಂ

ಸಿಡಬ್ಲ್ಯುಸಿ ಸಭೆಯಲ್ಲಿ ಭಾಗವಹಿಸಿದ್ದ ಮಾಜಿ ಸಚಿವ ಪಿ.ಚಿದಂಬರಂ ಅವರು ಬಿಸಿಲ ಝಳ ತಾಳಲಾರದೆ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಕೂಡಲೇ ಅಲ್ಲಿದ್ದ ಇತರೆ ಕಾಂಗ್ರೆಸ್ ನಾಯಕರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಚಿದಂಬರಂ ಪುತ್ರ ಕಾರ್ತಿ ಚಿದಂಬರಂ, “ತಂದೆಯವರು ಆರೋಗ್ಯವಾಗಿದ್ದಾರೆ’ ಎಂದು ಹೇಳಿದ್ದಾರೆ.


Share It

You May Have Missed

You cannot copy content of this page