ಅಪರಾಧ ಸುದ್ದಿ

ಗೋಪಾಲಸ್ವಾಮಿ ಬೆಟ್ಟದಲ್ಲಿ ಚಿತ್ರೀಕರಣಕ್ಕೆ ಅವಕಾಶ : ಪರಿಸರವಾದಿಗಳ ಆಕ್ರೋಶ

Share It

ಗುಂಡ್ಲುಪೇಟೆ : ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ನಿರ್ಬಂದಿತ ಪ್ರದೇಶ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಮಲಯಾಳಂ ಚಿತ್ರದ ಚಿತ್ರೀಕರಣಕ್ಕೆ ಅವಕಾಶ ನೀಡಿರುವ ಸರ್ಕಾರದ ಹಾಗೂ ಅರಣ್ಯ ಇಲಾಖೆ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ರಾತ್ರಿ ಸಂಚಾರದ ವಿಚಾರ ಮುನ್ನೆಲೆಗೆ ಬಂದ ಬೆನ್ನಲ್ಲೇ ಅರಣ್ಯ ಇಲಾಖೆ ಪ್ರತಿಷ್ಠಿತ ವನ್ಯಜೀವಿ ತಾಣವನ್ನೇ ಅಡಮಾನವಿರಿಸಲು ಹೊರಟಿದೆ ಎಂಬ ಗಂಭೀರ ಆರೋಪಗಳ ಜೊತೆಗೆ ವ್ಯಾಪಕ ಆಕ್ರೋಶಗಳು ವ್ಯಕ್ತವಾಗತೊಡಗಿವೆ.

ಈಗಾಗಲೇ ರಾಷ್ಟ್ರೀಯ ಹೆದ್ದಾರಿ 766 ರಲ್ಲಿ ರಾತ್ರಿ ಸಂಚಾರ ನಿಷೇಧವನ್ನ ತೆಗೆದುಹಾಕುವಂತೆ ಬೆನ್ನು ಬಿದ್ದಿರುವ ಕೇರಳಿಗರು ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ , ಮಲಯಾಳಂ ಚಿತ್ರದ ಚಿತ್ರೀಕರಣಕ್ಕೆ ಹಿಮವದ್ ಗೋಪಾಲಸ್ವಾಮಿ ಬೆಟ್ಟವನ್ನೇ ಆಯ್ಕೆ ಮಾಡಿಕೊಳ್ಳುವ ಮೂಲಕ ಸರ್ಕಾರ ಮತ್ತು ಅರಣ್ಯ ಇಲಾಖೆಯಿಂದ ಅನುಮತಿ ಪಡೆದು ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದೆ.

ಹಣದಾಸೆಗೆ ಜೋತುಬಿದ್ದ ಅರಣ್ಯ ಇಲಾಖೆ 1972 ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನೇ ಉಲ್ಲಂಘಿಸಿ ಪ್ರಾಣಿಪ್ರಭೇದ ಇತಿಹಾಸದ ಕುರುಹುಗಳನ್ನ ಸಂಪೂರ್ಣವಾಗಿ ನಾಶಪಡಿಸಲು ಮುಂದಾಗಿದೆ ಎಂದು ಪರಿಸರವಾದಿ ಜೋಸೆಫ್ ಹೂವರ್ ಕಿಡಿಕಾರಿದ್ದಾರೆ.

2015 ರಲ್ಲೇ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಗೋಪಾಲಸ್ವಾಮಿ ಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶಕ್ಕೆ ನಿರ್ಬಂಧ ಹೇರಿದ್ದ ಅರಣ್ಯ ಇಲಾಖೆ ಕೇರಳ ಸಿನಿಮಾ ತಂಡದವರಿಗೆ ಬೆಟ್ಟದ ಮೇಲೆ ದೇಗುಲದ ಮುಂಭಾಗವೇ ಅದ್ವಾನ ಮಾಡಲು ಸಂಪೂರ್ಣ ಅನುಮತಿ ನೀಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ.

ಸ್ಥಳೀಯರಿಗೆ ಕಾಡಿನ ಒಳಗಿರುವ ದೇವಸ್ಥಾನಗಳಿಗೆ ಹಬ್ಬಹರಿದಿನಗಳಂದು ತೆರಳಿ ಪೂಜೆ ಸಲ್ಲಿಸಿ ವಾಪಾಸ್ ಬರಲು ಅರಣ್ಯ ಇಲಾಖೆ ಅನುಮತಿಗಾಗಿ ವಾರಗಟ್ಟಲೆ ಕಾಯಬೇಕಾದ ಅನಿವಾರ್ಯತೆ ಇದೆ ಆದರೆ ಸಿನಿಮಾ ಚಿತ್ರೀಕರಣಕ್ಕೆ ಮಾತ್ರ ಅವಕಾಶ ನೀಡಿರುವುದ್ಯಾಕೆ ಎಂದು ಹಂಗಳ ಗ್ರಾಮದ ರೈತ ಮುಖಂಡ ಮಾಧು ಪಿಸಿಸಿಎಫ್ ಅವರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

ವನ್ಯಪ್ರಾಣಿಗಳಿಗೆ ಯಾವುದೇ ರೀತಿಯಾಗಿ ಕಿರಿಕಿರಿ ಉಂಟಾಗದಿರಲಿ ಎಂದು ಖಾಸಗಿ ವಾಹನಗಳಿಗೆ ನಿರ್ಬಂಧ ಹೇರಿದ್ದ ಅರಣ್ಯ ಇಲಾಖೆ ಸಿನಿಮಾದವರಿಗೆ ಅವಕಾಶ ನೀಡಿರುವುದು ಖಂಡನೀಯ ನಡೆಯಾಗಿದೆ ಹಾಗಾದರೆ ಬೆಟ್ಟದ ಮೇಲೆ ಸ್ವಚ್ಛಂದವಾಗಿ ಸಂಚರಿಸುವ ಆನೆ ಹುಲಿ ಇನ್ನಿತರ ಪ್ರಾಣಿಗಳಿಗೆ ಅಡ್ಡಿಪಡಿಸಿದಂತಲ್ಲವೇ ಅರಣ್ಯ ಇಲಾಖೆ ಮಲತಾಯಿ ಧೋರಣೆ ನಮ್ಮ ಬಂಡೀಪುರವನ್ನ ನಾಶ ಮಾಡುವ ಮುನ್ಸೂಚನೆ ತೋರುತ್ತಿದೆ,

ಸ್ಥಳೀಯರಿಗೆ ಅವಕಾಶ ನೀಡದ ಅರಣ್ಯ ಇಲಾಖೆ ಸಿನಿಮಾ ಧಾರವಾಹಿ ಯಾವುದೇ ಮನೋರಂಜನೆ ಶೂಟಿಂಗ್ ಗಳಿಗೆ ಅವಕಾಶ ನೀಡಬಾರದಿತ್ತು ಇದನ್ನೆಲ್ಲಾ ಗಮನಿಸುತ್ತಾ ಹೋದಲ್ಲಿ ಬೇಲಿಯೇ ಎದ್ದು ಹೊಲವನ್ನ ಮೇಯ್ದಂತೆ ಬಾಸವಾಗುತ್ತಿದೆ ನಮ್ಮ ಅರಣ್ಯವನ್ನ ಉಳಿಸಿಕೊಳ್ಳಲು ಎಲ್ಲರೂ ಸಂಕಲ್ಪ ಮಾಡಬೇಕಾಗಿದೆ ಅರಣ್ಯ ಇಲಾಖೆ ನಡೆ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಪರಿಸರಪ್ರೇಮಿ ಹಾಗೂ ಗಡಿನಾಡ ರಕ್ಷಣಾ ಸೇನೆ ಯುವಘಟಕ ತಾಲೂಕು ಅಧ್ಯಕ್ಷ ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ.


Share It

You cannot copy content of this page