ಸುದ್ದಿ

ಕನ್ನಡಿಗನ ಕಮಾಲ್: ರಾಜಸ್ಥಾನ ಮಣಿಸಿ ಅಗ್ರಸ್ಥಾನಕ್ಕೇರಿದ ಗುಜರಾತ್ ಟೈಟಾನ್ಸ್

Kannadigan Kamal: Gujarat Titans beat Rajasthan to top spot
Share It

ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡ ಸತತ ನಾಲ್ಕನೇ ಪಂದ್ಯವನ್ನು ಗೆದ್ದು ಗೆಲುವಿನ ಓಟವನ್ನು ಮುಂದುವರೆಸಿದೆ. ಬುಧವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ೫೮ ರನ್‌ಗಳಿಂದ ಮಣಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡವು ಸಾಯಿ ಸುದರ್ಶನ್ (೮೨) ಭರ್ಜರಿ ಬ್ಯಾಟಿಂಗ್ ನೆರವಿನಿಂದ ನಿಗದಿತ ೨೦ ಓವರ್‌ಗಳಲ್ಲಿ ೬ ವಿಕೆಟ್‌ಗಳ ನಷ್ಟಕ್ಕೆ ೨೧೭ ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ ತಂಡ ೧೯.೨ ಓವರ್‌ಗಳಲ್ಲಿ ೧೫೯ ರನ್ ಗಳಿಗೆ ಆಲೌಟ್ ಆಯಿತು.

ಹೆಟ್ಮೆಯರ್ (೫೨) ಅರ್ಧಶತಕ ಸಿಡಿಸಿದರೆ, ಸಂಜು ಸ್ಯಾಮ್ಸನ್ (೪೧) ಮತ್ತು ರಿಯಾನ್ ಪರಾಗ್ (೨೬) ರನ್ ಗಳಿಸಿದರು. ಕಳೆದ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ಯಶಸ್ವಿ ಜೈಸ್ವಾಲ್ (೬) ಈ ಪಂದ್ಯದಲ್ಲಿ ಠುಸ್ ಆದರು. ಉಳಿದಂತೆ ನಿತೀಶ್ ರಾಣಾ (೧), ಧ್ರುವ್ ಜುರೆಲ್ (೫) ಮತ್ತು ಶುಭಂ ದುಬೆ (೧) ಸಿಂಗಲ್ ಡಿಜಿಟ್‌ಗೆ ಪೆವಿಲಿಯನ್ ಸೇರಿದರು.
ಗುಜರಾತ್ ಬೌಲರ್‌ಗಳಲ್ಲಿ ಪ್ರಸಿದ್ಧ ಕೃಷ್ಣ ೩ ವಿಕೆಟ್ ಉರುಳಿಸಿದರೆ, ರಶೀದ್ ಖಾನ್ ೨, ಸಾಯಿ ಕಿಶೋರ್ ೨, ಸಿರಾಜ್, ಅರ್ಷದ್ ಖಾನ್ ಮತ್ತು ಕುಲ್ವಂತ್ ಖೆಜ್ರೋಲಿಯಾ ತಲಾ ಒಂದು ವಿಕೆಟ್ ಪಡೆದರು.

ಗುಜರಾತ್ ಟೈಟಾನ್ಸ್ ಇನ್ನಿಂಗ್ಸ್: ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಬಂದ ಗುಜರಾತ್‌ಗೆ ಜೋಫ್ರಾ ಆರ್ಚರ್ ಆರಂಭದಿAದಲೇ ಆಘಾತ ನೀಡಿದರು. ಇನ್ನಿಂಗ್ಸ್ನ ಮೂರನೇ ಓವರ್‌ನ ಮೊದಲ ಎಸೆತದಲ್ಲೇ ಶುಭಮನ್ ಗಿಲ್ (೨) ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಇನ್ನೊಂದು ತುದಿಯಲ್ಲಿ ಸಾಯಿ ಸುದರ್ಶನ್ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿದರು.
ಜೋಸ್ ಬಟ್ಲರ್ (೩೬) ಕೂಡ ಬೌಂಡರಿಗಳನ್ನು ಬಾರಿಸುತ್ತ ಸ್ಕೋರ್‌ಬೋರ್ಡ್ನ ವೇಗ ಹೆಚ್ಚಿಸಿದರು. ಸುದರ್ಶನ್ ತಮ್ಮ ಇನ್ನಿಂಗ್ಸ್ನ ಹತ್ತನೇ ಓವರ್‌ನಲ್ಲಿ ಅರ್ಧಶತಕವನ್ನು (೩೨ ಎಸೆತಗಳಲ್ಲಿ) ಪೂರೈಸಿದರು.

ಅದೇ ಓವರ್‌ನ ಕೊನೆಯ ಎಸೆತದಲ್ಲಿ ಬಟ್ಲರ್ ಪೆವಿಲಿಯನ್ ಸೇರಿದರು. ಈ ಅನುಕ್ರಮದಲ್ಲಿ, ಗುಜರಾತ್ ಸ್ಕೋರ್ ೧೦ ಓವರ್‌ಗಳ ನಂತರ ೯೪/೨ಕ್ಕೆ ತಲುಪಿತು. ಮುಂದೆ ಕ್ರೀಸ್‌ಗೆ ಬಂದ ಶಾರುಖ್ ಖಾನ್ (೩೬) ಕೂಡ ಭರ್ಜರಿ ಪ್ರದರ್ಶನ ನೀಡಿದರು. ಸುದರ್ಶನ್ ಅವರನ್ನು ೧೯ನೇ ಓವರ್‌ನಲ್ಲಿ ತುಷಾರ್ ದೇಶಪಾಂಡೆ ಔಟ್ ಮಾಡಿದರು. ಅದೇ ಓವರ್‌ನ ಕೊನೆಯ ಎಸೆತದಲ್ಲಿ ರಶೀದ್ ಖಾನ್ ಕ್ಯಾಚೌಟಾದರು.
ರಾಹುಲ್ ತೆವಾಟಿಯಾ (೨೪*) ಕೊನೆಯಲ್ಲಿ ಮಿಂಚಿದರು. ರಾಜಸ್ಥಾನದ ಬೌಲರ್‌ಗಳಲ್ಲಿ ಮಹೀಶ್ ತೀಕ್ಷನ್ ೨ ವಿಕೆಟ್ ಪಡೆದರೆ, ತುಷಾರ್ ದೇಶಪಾಂಡೆ ೨, ಜೋಫ್ರಾ ಆರ್ಚರ್ ಮತ್ತು ಸಂದೀಪ್ ಶರ್ಮಾ ತಲಾ ಒಂದು ವಿಕೆಟ್ ಪಡೆದರು.

ಕಮಾಲ್ ಮಾಡಿದ ಕನ್ನಡಿಗ: ಈ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ ತಂಡದ ಪರ ಆರಂಭಿಕ ಬ್ಯಾಟರ್ ಸಂಜು ಸ್ಯಾಮ್ಸನ್ ಮತ್ತು ಶಿಮ್ರಾನ್ ಹೆಟ್ಮೆಯರ್ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ್ದರು. ಆದರೆ, ಇವರ ವೇಗದ ಬ್ಯಾಟಿಂಗ್‌ಗೆ ಕನ್ನಡಿಗ ಪ್ರಸಿದ್ಧ ಕೃಷ್ಣ ಬ್ರೇಕ್ ಹಾಕಿದರು.

೧೨.೨ನೇ ಓವರ್‌ನಲ್ಲಿ ಸಂಜು ವಿಕೆಟ್ ಪಡೆದ ಪ್ರಸಿದ್ಧ್ ೧೫.೬ನೇ ಓವರ್‌ನಲ್ಲಿ ಹೆಟ್ಮೇಯರ್ ವಿಕೆಟ್ ಉರುಳಿಸಿದರು. ಒಂದು ವೇಳೆ ಈ ಇಬ್ಬರು ಕ್ರೀಸ್‌ನಲ್ಲಿ ಉಳಿದಿದ್ದರೆ ಟೈಟಾನ್ಸ್ಗೆ ಗೆಲುವು ಕಷ್ಟವಾಗಿತ್ತು. ಪ್ರಮುಖ ವಿಕೆಟ್ ಪಡೆದ ಪ್ರಸಿದ್ಧ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.


Share It

You cannot copy content of this page