ರಾಜಕೀಯ ಸುದ್ದಿ

ಚೀನಾದ ಉತ್ಪನ್ನಗಳಿಗೆ ಶೇ.254 ರಷ್ಟು ಸುಂಕ ವಿಧಿಸಿದ ಅಮೆರಿಕಾ!

Share It

ವಾಷಿಂಗ್ಟನ್‌/ಬೀಜಿಂಗ್‌: ಅಮೆರಿಕ-ಚೀನಾ ನಡುವೆ ವಾಣಿಜ್ಯ ಸಮರ ಜೋರಾಗುತ್ತಿದೆ. ಈ ನಡುವೆ ಟ್ರಂಪ್‌ ಆಡಳಿತವು ಚೀನಾದ ಆಮದು ಸರಕುಗಳ ಮೇಲೆ ಶೇ.245 ರಷ್ಟು ಸುಂಕ ವಿಧಿಸಿದೆ. ಶ್ವೇತಭವನದ ಫ್ಯಾಕ್ಟ್‌ ಶೀಟ್‌ನಿಂದ ಈ ಮಾಹಿತಿ ಬಹಿರಂಗವಾಗಿದೆ.

ಮಂಗಳವಾರ ಶ್ವೇತಭವನ ಬಿಡುಗಡೆ ಮಾಡಿದ ಫ್ಯಾಕ್ಟ್‌ ಶೀಟ್‌ ಪ್ರಕಾರ 245% ಸುಂಕ ನಿಗಧಿಪಡಿಸಿರುವುದು ಖಚಿತವಾಗಿದೆ. ಈ ಮೂಲಕ ಚೀನಾ ಪ್ರತಿರೋಧಕ್ಕೆ ಅಮೆರಿಕ ದೊಡ್ಡ ಹೊಡೆತ ಕೊಟ್ಟಿದೆ.

ವಿಶ್ವದ ಬಲಾಢ್ಯ ಆರ್ಥಿಕತೆ ಹೊಂದಿರುವ ಅಮೆರಿಕ ಮತ್ತು ಚೀನಾ ಮಧ್ಯೆ ನಡೆಯುತ್ತಿರುವ ವಾಣಿಜ್ಯ ಸಮರ ಜೋರಾಗುತ್ತಲೇ ಇದೆ. ಇತ್ತೀಚೆಗಷ್ಟೇ ಅಮೆರಿಕದ 145% ಪ್ರತಿ ಸುಂಕ ನೀತಿಗೆ ವಿರುದ್ಧವಾಗಿ ಚೀನಾ ಅಮೆರಿಕದ ವಸ್ತುಗಳಿಗೆ 125% ಸುಂಕ ವಿಧಿಸಿತ್ತು. ಅಲ್ಲದೇ ಒಂದು ದಿನದ ಹಿಂದೆಯಷ್ಟೇ ಸೆಮಿಕಂಡಕ್ಟರ್‌, ಐಟಿ ಉತ್ಪನ್ನಗಳಲ್ಲಿ ಬಳಕೆಯಾಗುವ ಅಪರೂಪದ ಲೋಹ ರಫ್ತಿಗೆ ನಿರ್ಬಂಧ ಹೇರಿತ್ತು. ಜೊತೆಗೆ ಅಮೆರಿಕದ ಬೋಯಿಂಗ್‌ ಕಂಪನಿಯ ವಿಮಾನ ಖರೀದಿ ನಿಲ್ಲಿಸುವಂತೆ ತನ್ನ ದೇಶದ ವಿಮಾನಯಾನ ಸಂಸ್ಥೆಗಳಿಗೆ ಆದೇಶ ನೀಡಿತ್ತು. ಇದಕ್ಕೆ ಪ್ರತೀಕಾರವಾಗಿ ಅಮೆರಿಕ ಚೀನಾದ ಆಮದು ವಸ್ತುಗಳ ಮೇಲಿನ ಸುಂಕವನ್ನು ಬರೋಬ್ಬರಿ 245%ಗೆ ಏರಿಕೆ ಮಾಡಿದೆ.

ಅಮೆರಿಕದ ನಿರ್ಧಾರಕ್ಕೆ ಪ್ರತಿಕ್ರಿಯಿಸಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್, ಸುಂಕದ ವಿಷಯದಲ್ಲಿ ಚೀನಾ ತನ್ನ ಗಂಭೀರ ನಿಲುವನ್ನು ಪದೇ ಪದೇ ಹೇಳುತ್ತಲೇ ಇದೆ. ಸುಂಕದ ಸಮರವನ್ನು ಮೊದಲು ಪ್ರಾರಂಭಿಸಿದ್ದು ಅಮೆರಿಕ. ಚೀನಾ ತನ್ನ ಕಾನೂನುಬದ್ಧ ಹಕ್ಕುಗಳು, ಹಿತಾಸಕ್ತಿ ಕಾಪಾಡಲು ಅಗತ್ಯ ಪ್ರತಿಕ್ರಮಗಳನ್ನು ತೆಗೆದುಕೊಂಡಿದೆ ಅಷ್ಟೇ ಅಂತ ಹೇಳಿದ್ದಾರೆ.


Share It

You cannot copy content of this page