ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಗಾಳಿ ಬೆಳಕು ಹೊರತುಪಡಿಸಿ ಉಳಿದೆಲ್ಲ ವಸ್ತುಗಳ ಮೇಲೆ ಜಿಎಸ್ ಟಿ ಹಾಕಿದ್ದು, ಬೆಲೆ ಏರಿಕೆ ಹರಿಕಾರರಾಗಿದ್ದಾರೆ ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗ ರೆಡ್ಡಿ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಆಯೋಜಿಸಿದ್ದ ಕೇಂದ್ರ ಸರಕಾರದ ವಿರುದ್ಧದ ಹೋರಾಟದಲ್ಲಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ನಾಯಕರು ಜನಾಕ್ರೋಶ ಯಾತ್ರೆ ಮಾಡುತ್ತಿದ್ದಾರೆ. ಅವರಿಗೆ ಮಾನ, ಮರ್ಯಾದೆ ಇದ್ದರೆ ಕೇಂದ್ರದ ಬಿಜೆಪಿ ಸರಕಾರದ ವಿರುದ್ಧ ಪ್ರತಿಭಟನೆ ಮಾಡಬೇಕಿತ್ತು. 2014 ರಿಂದ ಈವರೆಗೆ ದಿನನಿತ್ಯದ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದನ್ನು ಪ್ರಶ್ನಿಸುವ ತಾಕತ್ತು ರಾಜ್ಯದ ಬಿಜೆಪಿ ನಾಯಕರಿಗಿಲ್ಲ ಎಂದರು.
ಮೋದಿ ಅವರು ಸುಳ್ಳು ಹೇಳಿ ಅಧಿಕಾರಕ್ಕೆ ಬಂದರು. 410 ರು. ಇದ್ದ ಗ್ಯಾಸ್ ಬೆಲೆಯನ್ನು 200 ರೂ. ಮಾಡ್ತೇವೆ ಎಂದು ಹೇಳಿದ್ದರು. 2014 ರಲ್ಲಿ 410 ರು. ಇದ್ದ ಸಿಲಿಂಡರ್ ಬೆಲೆ ಇದೀಗ 900 ರೂ ಆಗಿದೆ. ಡೀಸೆಲ್ 98, ಪೆಟ್ರೋಲ್102 ರು. ಆಗಿದೆ. ಇದೆಲ್ಲವೂ ಕೇಂದ್ರ ಸರಕಾರದ ಕೊಡುಗೆ. ಈಗ ನಿಜವಾಗಿ ಹೋರಾಟ ಮಾಡಬೇಕಿರುವುದು ಯಾರ ವಿರುದ್ಧ ಎಂದು ಬಿಜೆಪಿ ನಾಯಕರು ಅರಿತುಕೊಳ್ಳಲಿ ಎಂದರು.
ಜಿಎಸ್ ಟಿ ತರುವ ಮೂಲಕ ದೇಶದ ಎಲ್ಲ ಅಗತ್ಯ ವಸ್ತುಗಳ ಬೆಲೆಯನ್ನು ಏರಿಕೆ ಮಾಡಿದ್ದಾರೆ. ಗಾಳಿ, ಬೆಳಕನ್ನು ಹೊರತುಪಡಿಸಿ ಎಲ್ಲ ವಸ್ತುಗಳ ಮೇಲೆ ಜಿಎಸ್ ಟಿ ಹಾಕುತ್ತಿದ್ದಾರೆ. ಆದರೆ, ರಾಜ್ಯ ಸರಕಾರಗಲ ಪಾಲನ್ನು ಸರಿಯಾಗಿ ಕೊಡದೆ ತಾರತಮ್ಯ ಮಾಡುವ ಮೂಲಕ ಅನ್ಯಾಯ ಮಾಡುತ್ತಿದ್ದಾರೆ. ಬೆಲೆ ಏರಿಕೆ ವಿರೋಧಿಸಿ ಅಧಿಕಾರಕ್ಕೆ ಬಂದು ಬೆಲೆ ಏರಿಕೆಯನ್ನೇ ಕೆಲಸ ಮಾಡಿಕೊಂಡಿದ್ದಾರೆ. ಹೀಗಾಗಿ, ಅವರ ವಿರುದ್ಧ ಹೋರಾಟ ಅನಿವಾರ್ಯ ಎಂದು ಅವರು ತಿಳಿಸಿದರು.