ಹಾಸನದಲ್ಲಿ ಆನೆ ದಾಳಿ : ವೃದ್ಧನ ಸ್ಥಿತಿ ಗಂಭೀರ
ಹಾಸನ : ಜಿಲ್ಲೆಯಲ್ಲಿ ಆನೆ ಹಾವಳಿ ಮುಂದುವರಿದಿದ್ದು, ಇಂದು ಬೆಳ್ಳಮಬೆಳಗ್ಗೆ ಕಾಡಾನೆಯೊಂದು ವಯೋವೃದ್ಧನ ಮೇಲೆ ದಾಳಿ ಮಾಡಿರುವ ಘಟನೆ ನಡೆದಿದೆ.
ಜಿಲ್ಲೆಯ ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿ ಗ್ರಾಮದಲ್ಲಿ ಬೆಳ್ಳಂಬೆಳಗ್ಗೆ ಕಾಡಾನೆ ದಾಳಿ ಮಾಡಿದೆ. ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದ ವಯೋವೃದ್ಧ ರಾಜು ಮೇಲೆ ಏಕಾಏಕಿ ದಾಳಿ ನಡೆಸಿದೆ. ಸೊಂಡಿಲಿನಿಂದ ಎತ್ತಿ ಬಿಸಾಕಿದ್ದು, ಅನಂತರ ಕಾಲಿನಿಂದ ತುಳಿದಿದೆ ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆ ಸುತ್ತಮುತ್ತಲಿನ ಜನರು ಸೇರಿದ್ದು, ಆನೆಯನ್ನು ಬೆದರಿಸುವ ಪ್ರಯತ್ನ ನಡೆಸಿದ್ದಾರೆ. ಜನ ಗುಂಪುಗೂಡುತ್ತಿದ್ದಂತೆ ಪಕ್ಕದಲ್ಲಿರುವ ಕಂದಕದ ಮೂಲಕ ಆನೆ ಕಾಡಿಗೆ ಪರಾರಿಯಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಆನೆ ಸೆರೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.
ಗಂಭೀರವಾಗಿ ಗಾಯಗೊಂಡಿರುವ ವೃದ್ಧ ರಾಜು ಅವರನ್ನು ಹಾಸನದ ಮೆಡಿಕಲ್ ಕಾಲೇಜಿಗೆ ಚಿಕಿತ್ಸೆಗಾಗಿ ರವಾನೆ ಮಾಡಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿಯ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಆನೆ ದಾಳಿ ತಡೆಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


