ಐಐಟಿ ಖರಗ್‌ಪುರ್ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ಸಾವು: 10 ತಿಂಗಳಲ್ಲಿ ಇದು ಮೂರನೇ ಪ್ರಕರಣ
ಕೊಲ್ಕತ್ತಾ: ಖರಗ್‌ಪುರ ಐಐಟಿಯಲ್ಲಿ ವ್ಯಾಸಂಗ ಮಾಡುತ್ತಿದ್ದ 22 ವರ್ಷದ ವಿದ್ಯಾರ್ಥಿಯೊಬ್ಬ ತನ್ನ ಹಾಸ್ಟೆಲ್ ಕೋಣೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿರುವ ವಿದ್ಯಾರ್ಥಿಗಳು ತನಿಖೆಗೆ ಒತ್ತಾಯಿಸಿದ್ದಾರೆ.
ಕಳೆದ 10 ತಿಂಗಳಲ್ಲಿ ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ಮೂರನೇ ವಿದ್ಯಾರ್ಥಿಯ ಸಾವು ಇದಾಗಿದ್ದು, ಮಹಾರಾಷ್ಟç ಮೂಲದ 22 ವರ್ಷದ ವಿದ್ಯಾರ್ಥಿ ಅನಿಕೇತ್ ವಾಕರ್ ಮೃತ. ಈತ ಕ್ಯಾಂಪಸ್ ಸೆಲೆಕ್ಷನ್‌ನಲ್ಲಿ ಉದ್ಯೋಗದ ಆಫರ್ ಪಡೆದಿದ್ದ, ಜತೆಗೆ ವಿದ್ಯಾಭ್ಯಾಸದಲ್ಲಿಯೂ ಮುಂಚೂಣಿಯಲ್ಲಿದ್ದ ಎನ್ನಲಾಗಿದೆ.
ಹೀಗಿದ್ದರೂ, ಈತನ ಸಾವಿಗೆ ಕಾರಣವೇನು ಎಂಬ ಕುರಿತು ಅನುಮಾನ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಅನಿಕೇತ್ ತನ್ನ ಕೋಣೆಯ ಬಾಗಿಲು ತೆಗೆಯದೆ ಇದ್ದದ್ದು ಹಾಗೂ ಸ್ನೇಹಿತರ ಫೋನ್ ಕರೆಗಳಿಗೆ ಸ್ಪಂದಿಸದ ಕಾರಣಕ್ಕೆ ಭಾನುವಾರ ರಾತ್ರಿ ಸುಮಾರು 8 ಗಂಟೆಗೆ ಬಾಗಿಲು ಹೊಡೆದು ನೋಡಲಾಯಿತು.
ತಕ್ಷಣವೇ ಅವರ ತಾಯಿ ಹಾಗೂ ಹಿರಿಯ ಸಹೋದರರಿಗೆ ವಿಷಯ ತಿಳಿಸಿದ ಪೊಲೀಸರು, ಶವವನ್ನು ಮಿಡ್ನಾಪುರ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರ ಮಾಡಿ ಶವಪರೀಕ್ಷೆ ನಡೆಸಲಾಯಿತು. ಶವಪರೀಕ್ಷೆಯ ವರದಿಯ ನಿರೀಕ್ಷೆಯಲ್ಲಿರುವ ಪೊಲೀಸರು ಸ್ನೇಹಿತರು ಮತ್ತು ಸಿಬ್ಬಂದಿಯ ವಿಚಾರಣೆ ನಡೆಸುತ್ತಿದ್ದಾರೆ.


