ಬೆಂಗಳೂರು: 35 ವರ್ಷದ ಮಹಿಳೆಯ ಮೇಲೆ ಗ್ಯಾಂಗ್ ರೇಪ್ ನಡೆಸಿ, ಆಕೆಯ ಐದು ವರ್ಷದ ಮಗುವನ್ನು ಕತ್ತುಹಿಸುಕಿ ಕೊಂಡಿರುವ ಘಟನೆ ಹರಿಯಾಣ ರಾಜ್ಯದ ಜಿಂದ್ ಜಿಲ್ಲೆಯಲ್ಲಿ ನಡೆದಿದೆ.
ಇಷ್ಟೆಲ್ಲ ನಡೆದಿದ್ದರೂ, ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆ ನಡೆಸದೆ ಸಂಸ್ಕಾರ ನಡೆಸಲಾಗಿದ್ದು, ಈ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ಮಾಜಿಸ್ಟ್ರೇಟ್ ಸಮ್ಮುಖದಲ್ಲಿ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲು ಮುಂದಾಗಿದ್ದಾರೆ.
ಮಹಿಳೆ ಕೊಳಗೇರಿಯೊಂದರಲ್ಲಿ ವಾಸಿಸುತ್ತಿದ್ದು, ಚಿಂದಿ ಆಯುವ ಮೂಲಕ ಬದುಕು ಕಟ್ಟಿಕೊಂಡಿದ್ದರು. ಘಟನೆ ನಡೆದ ದಿನ ಆಕೆಯ ಪತಿ ಸ್ಥಳೀಯರ ಜತೆಗೆ ಜಗಳವಾಡಿಕೊಂಡು ಗುಡಿಸಲು ಬಿಟ್ಟು ಹೊರಹೋಗಿದ್ದ. ಈ ವೇಳೆ ಮನೆಗೆ ನುಗ್ಗಿದ ಆರೋಪಿ ಹಾಗೂ ಆತನ ಸಹಚರರು ಆಕೆಯನ್ನು ಪ್ರಜ್ಞೆ ತಪ್ಪಿಸಿ, ಆಕೆಯ ಚಿಕ್ಕ ಮಗಳೊಂದಿಗೆ ಅಪಹರಣ ಮಾಡಿದ್ದರು ಎಂದು ವರದಿಯಾಗಿದೆ.
ಆರೋಪಿಗಳು ಆಕೆಯನ್ನು ಕಸದ ಯಾರ್ಡ್‌ಗೆ ಕರೆದೊಯ್ದು ಅಲ್ಲಿ ಬಾಲಕಿಯನ್ನು ಕತ್ತುಹಿಸುಕಿ ಕೊಂದಿದ್ದು, ಅನಂತರ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಆಕೆಯನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿಟ್ಟು ಅಲ್ಲಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಮರುದಿನ ಸ್ಥಳೀಯರು ಆಕೆಯನ್ನು ಗಮನಿಸಿ ಮನೆಗೆ ಕರೆತಂದು ಮಗುವನ್ನು ಸಂಸ್ಕಾರ ಮಾಡಿದ್ದರು. ಹೀಗಾಗಿ, ಪೊಲೀಸರು ಮಾಜಿಸ್ಟ್ರೇಟ್ ಸಮ್ಮುಖದಲ್ಲಿ ಶವವನ್ನು ಹೊರತೆಗೆದು ಪರೀಕ್ಷೆ ನಡೆಸುತ್ತಿದ್ದು, ಎಫ್‌ಐಆರ್ ದಾಖಲಿಸಿಕೊಂಡು, ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.