ಹಿಸಾರ್ : 25 ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ಭಾವನಾ ಯಾದವ್ ಸಾವಿನ ಸುತ್ತ ನಿಗೂಢತೆಯ ಹುತ್ತ ಬೆಳೆದುಕೊಳ್ಳುತ್ತಲೇ ಸಾಗುತ್ತಿದ್ದು, ಆಕೆಯನ್ನು ಇರಿದು ಕೊಂದು ನಂತರ ಬೆಂಕಿಹಚ್ಚಿ ಸುಡಲಾಗಿದೆ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.
ಅಲ್ವಾರ್ ಜಿಲ್ಲೆಯ ಭಾವನಾ ಯಾದವ್ 2023ರಲ್ಲಿ ಫಿಲಿಪೈನ್ಸ್ನಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿದ್ದರು. ಸ್ನಾತಕೋತ್ತರ ಅಧ್ಯಯನಕ್ಕಾಗಿ ದೆಹಲಿಯ ಡಿಇಎಂಎಸ್ ಮೂಲಕ ಎಂಸಿಐ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಆನ್ಲೈನ್ ತರಗತಿಗೆ ಹಾಜರಾಗುತ್ತಿದ್ದು, ಪರೀಕ್ಷೆಗಾಗಿ ವಾರಕ್ಕೊಮ್ಮೆ ದೆಹಲಿಗೆ ತೆರಳುತ್ತಿದ್ದರು ಎಂದು ಅವರ ತಾಯಿ ಗಾಯತ್ರಿ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಏ.24ರಂದು ಗಾಯತ್ರಿ ಅವರಿಗೆ ಉಮೇಶ್ ಯಾದವ್ ಎಂಬ ವ್ಯಕ್ತಿಯೊಬ್ಬ ನಿಮ್ಮ ಮಗಳು ಸುಟ್ಟ ಗಾಯಗಳಿಂದ ಬಳಲುತ್ತಿದ್ದು, ಸೋನಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದ್ದ. ಅನಂತರ ಆಸ್ಪತ್ರೆಯಿಂದ ವಿಡಿಯೋ ಕರೆ ಬಂದಿದ್ದು, ಇದರಿಂದ ತಮ್ಮ ಮಗಳ ಸ್ಥಿತಿ ಗಂಭೀರವಾಗಿದೆ ಎಂಬುದು ಅವರಿಗೆ ಮನವರಿಕೆಯಾಗಿತ್ತು. ಸುದ್ದಿ ತಿಳಿದ ತಾಯಿ ಆಸ್ಪತ್ರೆಗೆ ಧಾವಿಸಿದ್ದು, ಆಸ್ಪತ್ರೆಯ ಸಿಬ್ಬಂದಿ ಘಟನೆಗೆ ಕಾರಣ ಮತ್ತು ಎಲ್ಲಿ ಘಟನೆ ನಡೆಯಿತು ಎಂಬ ಬಗ್ಗೆ ಯಾವ ಮಾಹಿತಿಯನ್ನೂ ಕೊಟ್ಟಿರಲಿಲ್ಲ ಎನ್ನಲಾಗಿದೆ.
ಆಕೆಯ ಸ್ಥಿತಿ ಗಂಭೀರವಾದ ಕಾರಣ ಆಕೆಯನ್ನು ಜೈಪುರದ ಎಸ್ಎಂಎಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಆಕೆ ಏ.24 ರಂದು ರಾತ್ರಿ ನಿಧನವಾದರು. ಭಾವನಾ ಮುಖ, ಹೊಟ್ಟೆ ಮತ್ತು ಮೊಣಕಾಲುಗಳು ತೀವ್ರವಾಗಿ ಸುಟ್ಟುಹೋಗಿದ್ದು, ಹಿಂಬದಿಯಲ್ಲಿ ಯಾವುದೇ ಸುಟ್ಟು ಗುರುತುಗಳೇ ಇಲ್ಲ. ಜತೆಗೆ ಆಕೆಯ ಮೇಲೆ ಹರಿತವಾದ ಆಯುಧದ ಗಾಯದ ಗುರುತುಗಳೀವೆ ಎಂದು ತಾಯಿ ಗಾಯತ್ರಿ ಯಾದವ್ ಆರೋಪಿಸಿದ್ದಾರೆ. ಇದು ಅಪಘಾತಕ್ಕಿಂತ ಉದ್ದೇಶಪೂರ್ವಕ ಕೊಲೆ ಎಂದು ಆರೋಪಿಸಿದ್ದು, ಆಕೆಯ ಲ್ಯಾಪ್ಟಾಪ್, ಮೊಬೈಲ್ ಫೋನ್ ಮತ್ತು ಇತರೆ ಪ್ರಮುಖ ದಾಖಲೆಗಳು ಕಾಣೆಯಾಗಿವೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ದೆಯಲಿಯಲ್ಲಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಭಾವನಾ ಸಹೋದರಿ ಮನೆಯಲ್ಲಿ ಭಾವನಾ ದೆಹಲಿಗೆ ಬಂದಾಗಲೆಲ್ಲ ವಾಸ್ತವ್ಯ ಹೂಡುತ್ತಿದ್ದಳು. ಏ.21, 22 ರಂದು ತನ್ನ ತಂಗಿಯೊಡನೆ ಇದ್ದು, ಪರೀಕ್ಷೆಗೂ ಭಾವನಾ ಹಾಜರಾಗಿದ್ದಳು. ಏ.23ರಂದು ತಾಯಿಗೆ ಕರೆ ಮಾಡಿ ಏ.24ರ ರಾತ್ರಿ ಮನೆಗೆ ಬರುವುದಾಗಿ ತಿಳಿಸಿದ್ದಳು. ಆದರೆ, ಆಕೆ ಬಂದಿರಲಿಲ್ಲ. ಹೀಗಾಗಿ, ಆಕೆಯ ಸಾವಿನ ಬಗ್ಗೆ ತಾಯಿ ಅನುಮಾನ ವ್ಯಕ್ತಪಡಿಸಿದ್ದಾರೆ. ರಾಜಸ್ಥಾನ ಪೊಲೀಸರು ಝೀರೋ ಎಫ್ಐಆರ್ ದಾಖಲಿಸಿಕೊಂಡು, ಹಿಸಾರ್ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಗೆ ರವಾನೆ ಮಾಡಿದ್ದಾರೆ. ತನಿಖೆ ಮುಂದುವರಿದಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.