ವಿಶಾಖಪಟ್ಟಣ: ಆಂಧ್ರಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಇಲ್ಲಿನ ಶ್ರೀ ವರಾಹ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಗೋಡೆ ಕುಸಿದು ಏಳು ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ.
ದೇಗುಲದಲ್ಲಿ ಚಂದನೋತ್ಸವ ನಡೆಯುತ್ತಿರುವಾಗಲೇ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಇತರ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಬಗ್ಗೆ ಆಂಧ್ರಪ್ರದೇಶದ ಗೃಹ ಸಚಿವ ವಿ.ಅನಿತಾ ಅವರು ಪ್ರತಿಕ್ರಿಯಿಸಿ, ಸಿಂಹಾಚಲಂ ದೇವಾಲಯದ ಗೋಡೆ ಕುಸಿತ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಮಣ್ಣು ಸಡಿಲಗೊಂಡಿದ್ದರಿಂದ ಘಟನೆ ಉಂಟಾಗಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ಅಧಿಕಾರಿಗಳ ತಂಡಗಳು ರಕ್ಷಣೆಯಲ್ಲಿ ತೊಡಗಿವೆ. ಗಾಯಾಳುಗಳನ್ನು ವಿಶಾಖಪಟ್ಟಣ ಕೆಜಿಹೆಚ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಹೆಚ್ಚು ಮಳೆಯಾಗಿದ್ದು, ಎಲ್ಲಾ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಘಟನೆಯು ಬುಧವಾರ 2:30ರ (ಮುಂಜಾನೆ) ಸುಮಾರಿಗೆ ಸಂಭವಿಸಿದೆ. ಘಟನೆಯಲ್ಲಿ ಏಳು ಜನರು ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಘಟನೆ ವರದಿಯಾದ ನಂತರ ನಾವು ತಕ್ಷಣ ಸ್ಥಳಕ್ಕೆ ತಲುಪಿದ್ದೇವೆ ಎಂದು ಎಸ್‌ಡಿಆರ್‌ಎಫ್ ಅಧಿಕಾರಿಗಳು ಹೇಳಿದ್ದಾರೆ.