ಇಲಿ ಸತ್ತ ವಾಸನೆಯ ಹೈಡ್ರಾಮಾ:ಪ್ರೇಯಸಿಯನ್ನು ಕೊಂದು ಹಾಸಿಗೆಯಡಿ ಅವಿತಿಟ್ಟಿದ್ದ ಆರೋಪಿ
ಫರಿದಾಬಾದ್: ಮಹಿಳೆಯೊಂದಿಗೆ ಲೀವ್ ಇನ್ ರಿಲೇಷನ್ ಶಿಪ್‌ನಲ್ಲಿದ್ದ ವ್ಯಕ್ತಿಯೊಬ್ಬ ತನ್ನ ಮನೆಯಲ್ಲಿ ಇಲಿ ಸತ್ತಿದೆ ಎಂದು ಹೇಳಿಕೊಂಡು ಕೊಳೆತ ಶವದ ಜತೆಗೆ ಎರಡು ದಿನಗಳನ್ನು ಕಳೆದ ವಿಚಿತ್ರ ಘಟನೆ ವರದಿಯಾಗಿದೆ.
ನಗರದ ಜವಾಹರ್ ಕಾಲನಿಯಲ್ಲಿ 49 ವರ್ಷದ ಜಿತೇಂದ್ರ ಎಂಬ ವ್ಯಕ್ತಿ 40 ವರ್ಷದ ಸೋನಿಯಾ ಎಂಬಾಕೆ ಯೊಂದಿಗೆ ಲೀವ್ ಇನ್ ರಿಲೇಷನ್ ಶಿಪ್‌ನಲ್ಲಿದ್ದ. ಈ ವೇಳೆ ತನ್ನ ಮೊದಲ ಪತ್ನಿಯ ಮಗಳ ವಿವಾಹಕ್ಕೆ ಸಂಬಂಧಿಸಿದಂಯತೆ ಇಬ್ಬರ ನಡುವೆ ಜಗಳ ಉಂಟಾಗಿತ್ತು. ಹೀಗಾಗಿ, ಆತ ಆಕೆಯನ್ನು ಕತ್ತು ಹಿಸುಕಿ ಸಾಯಿಸಿ, ಶವವನ್ನು ಹಾಸಿಗೆಯ ಕೆಳಗೆ ಬಚ್ಚಿಟ್ಟಿದ್ದ ಎನ್ನಲಾಗಿದೆ.
ಏ.21 ರಂದು ಈ ಘಟನೆ ನಡೆದಿದ್ದರೂ, ಆತ ಎರಡು ದಿನಗಳ ಕಾಲ ಶವದೊಂದಿಗೆ ರೂಮಿನಲ್ಲಿಯೇ ಕಾಲ ಕಳೆದಿದ್ದ ಎನ್ನಲಾಗಿದೆ. ವಾಸನೆ ಕಡಿಮೆ ಮಾಡಲು ಸುಗಂಧ ದ್ರವ್ಯ, ಗಂಧದ ಕಡ್ಡಿ ಹಚ್ಚಿ ಕೊಂಡಿರುತ್ತಿದ್ದ. ಇದನ್ನು ಮನೆಯ ಮಾಲೀಕರು ಪ್ರಶ್ನೆ ಮಾಡಿದ್ದು, ಇಲಿ ಸತ್ತಿರಬಹುದು. ಹೀಗಾಗಿ, ವಿಪರೀತ ವಾಸನೆ ಬರುತ್ತಿದೆ ಎಂದು ಹೇಳಿದ್ದ. ಮನೆ ಮಾಲೀಕರು ಕೂಡ ಜಿತೇಂದ್ರ ಮಾತನ್ನು ನಂಬಿದ್ದರು.
ವಾಸನೆ ವಿಪರೀತವಾಗುತ್ತಿದ್ದಂತೆ ಮನೆಗೆ ಬೀಗ ಹಾಕಿಕೊಂಡು ಪರಾರಿಯಾದ ಜಿತೇಂದ್ರ, ಸೋನಿಯಾ ಕೊಲೆ ಮಾಡಿರುವ ವಿಷಯವನ್ನು ತನ್ನ ಅಜ್ಜಿಯೊಂದಿಗೆ ಹೇಳಿಕೊಂಡಿದ್ದ. ಅಜ್ಜ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಮನೆಯ ಬೀಗಹೊಡೆದು ನೋಡಿದಾಗ, ದುರ್ವಾಸನೆ ಸಹಿತ ಕೊಳೆತ ಸ್ಥಿತಿಯಲ್ಲಿ ಸೋನಿಯಾ ಶವ ಪತ್ತೆಯಾಗಿದೆ. ಪೊಲೀಸರು ಜಿತೇಂದ್ರನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.


