ದೇಶದಲ್ಲಿ ಜಾತಿಗಣತಿಗೆ ಕೇಂದ್ರ ಸರಕಾರ ನಿರ್ಧಾರ: ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡ ಕೇಂದ್ರ
ನವದೆಹಲಿ: ಕರ್ನಾಟಕದ ಜನಗಣತಿಯನ್ನು ವಿರೋಧಿಸುತ್ತಲೇ ಬಂದಿದ್ದ ಬಿಜೆಪಿ ನಾಯಕರಿಗೆ ಮುಜುಗರವಾಗುವಂತಹ ನಿರ್ಧಾರವನ್ನು ಇದೀಗ ಕೇಂದ್ರ ಸರಕಾರ ತೆಗೆದುಕೊಂಡಿದ್ದು, ಜಾತಿಗಣತಿಗೆ ತೀರ್ಮಾನಿಸಿದೆ.
ದೇಶಾದ್ಯಂತ ಎಲ್ಲ ರಾಜ್ಯಗಳಲ್ಲಿ ಜಾತಿಗಣತಿ ನಡೆಸಲಾಗುವುದು. ಈಗಾಗಲೇ ಜನಗಣತಿ ಆರಂಭವಾಗಿದ್ದು, ಜನಗಣತಿ ಜತೆಯಲ್ಲಿ ಜಾತಿಗಣತಿಯನ್ನು ನಡೆಸಲು ಕೇಂದ್ರ ಸರಕಾರ ತೀರ್ಮಾನಿಸಿದೆ ಎಂದು ಸಚಿವ
ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ಜಾತಿಗಣತಿ ನಡೆಸಲು ಮುಂದಾಗಿರುವ ಕುರಿತು ಮಾಹಿತಿ ನೀಡಿದರು. ಈಗಾಗಲೇ ಕರ್ನಾಟಕದಲ್ಲಿ ಜಾತಿಗಣತಿ ವರದಿಯನ್ನು ಸರಕಾರ ಅಂಗೀಕರಿಸಿದೆ. ಸಿಎಂ ಸಿದ್ದರಾಮಯ್ಯ ಕೇಂದ್ರ ಸರಕಾರ ಬೇಕಿದ್ದರೆ ದೇಶಾದ್ಯಂತ ಜಾತಿಗಣತಿ ನಡೆಸಲಿ ಎಂದು ಸವಾಲು ಹಾಕಿದ್ದರು. ಇದೀಗ ಕೇಂದ್ರ ಸರಕಾರ ಜಾತಿಗಣತಿಯ ನಿರ್ಧಾರಕ್ಕೆ ಬಂದಿದೆ.
ಕಾಂಗ್ರೆಸ್ ಪಕ್ಷ ಜಾತಿಗಣತಿ ವಿಚಾರದಲ್ಲಿ ರಾಜಕೀಯ ನಡೆಸುತ್ತಿದೆ. ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಅವೈಜ್ಞಾನಿಕ ಸರ್ವೇ ನಡೆಸಿ, ಜನರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದೆ. ಹೀಗಾಗಿ, ಕೇಂದ್ರ ಸರಕಾರ ಜನಗಣತಿಯ ಜತೆಜತೆಗೆ ಜಾತಿಗಣತಿಯನ್ನು ಮಾಡಲು ತೀರ್ಮಾನಿಸಿದೆ ಎಂದು ವೈಷ್ಣವ್ ತಿಳಿಸಿದ್ದಾರೆ.


