ಕಾಣೆಯಾಗಿದ್ದ ನೆಲಮಂಗಲದ ತಂದೆ ಮತ್ತು ಇಬ್ಬರು ಮಕ್ಕಳು ಕೆಆರ್ಎಸ್ ಬಳಿ ಶವವಾಗಿ ಪತ್ತೆ
ಮಂಡ್ಯ: ಕೆಆರ್ಎಸ್ ಅಣೆಕಟ್ಟೆ ಬಳಿಯ ಕಾಲುವೆಯಲ್ಲಿ ಕಾರೊಂದು ಪತ್ತೆಯಾಗಿದ್ದು, ಕಾರಿನಲ್ಲಿ ತಂದೆ ಮತ್ತು ಇಬ್ಬರು ಮಕ್ಕಳ ಶವ ಸಿಲುಕಿಕೊಂಡಿರುವುದು ಕಂಡುಬಂದಿದೆ.
ಮೃತರನ್ನು ನೆಲಮಂಗಲ ಮೂಲದ ಕುಮಾರಸ್ವಾಮಿ(39) ಮತ್ತು ಮಕ್ಕಳಾದ ಅದ್ವಿತ್(9) ಹಾಗೂ ಅಕ್ಷರ(7) ಎಂದು ಗುರುತಿಸಲಾಗಿದೆ. ಕೌಟುಂಬಿಕ ಕಲಹದಿಂದಾಗಿ ಕುಮಾರಸ್ವಾಮಿ ಆತ್ಮಹತ್ಯೆಯಂತಹ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಏಪ್ರಿಲ್ 17 ರಂದು ಮನೆಯಲ್ಲಿ ಜಗಳ ಮಾಡಿಕೊಂಡು ಮಕ್ಕಳೊಂದಿಗೆ ಕಾರಿನಲ್ಲಿ ಹೊರಟಿದ್ದ ಕುಮಾರಸ್ವಾಮಿ, ಅಂದು ರಾತ್ರಿ 9 ಗಂಟೆಗೆ ತಮ್ಮ ತಂದೆಗೆ ಕರೆ ಮಾಡಿ ಮಾತನಾಡಿ, ಕೆಆರ್ಎಸ್ಗೆ ಭೇಟಿ ನೀಡಿ ವಾಪಸ್ ಬರುತ್ತಿರುವುದಾಗಿ ತಿಳಿಸಿದ್ದರು. ಅಂದಿನಿಂದ ಅವರ ಫೋನ್ ಸ್ವಿಚ್ಡ್ ಆಪ್ ಆಗಿತ್ತು.
ಎರಡು ದಿನಗಳ ನಂತರ ಕುಟುಂಬಸ್ಥರು ನೆಲಮಂಗಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಇದೀಗ ಕೆಆರ್ಎಸ್ ಬಳಿಯ ಕಾಲುವೆಯಲ್ಲಿ ಶವ ಪತ್ತೆಯಾಗಿದ್ದು, ಉದ್ದೇಶಪೂರ್ವಕವಾಗಿ ಕಾಲುವೆಗೆ ಕಾರು ಚಲಾಯಿಸಿ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಕಾರು ಸಿಕ್ಕಿರುವ ಜಾಗದಲ್ಲಿ ಕಾರು ಚಲಾಯಿಸುವುದು ಸುಲಭವಲ್ಲ, ಅದು ಸಾಮಾನ್ಯ ದಾರಿಯೂ ಆಗಿರದ ಕಾರಣದಿಂದ ಬೇಕೆಂದೇ ಅಲ್ಲಿಗೆ ಕಾರು ಚಲಾಯಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು. ಕಾಲುವೆಯ ನೀರಿನ ಪ್ರಮಾಣ ಕಡಿಮೆಯಾದ ನಂತರ ದಾರಿಹೋಕರು ಕಾರನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದರು. ಅನಂತರ ಅಗ್ನಿಶಾಮಕ ಸಿಬ್ಬಂದಿ ಕಾರಿನ ಜತೆಗೆ ಶವಗಳನ್ನು ಹೊರತೆಗೆದರು ಎಂದು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.


