ಬೀದರ್ : ಶೀಲ ಶಂಕಿಸಿ ಪತಿಯೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿದ ಘಟನೆ ಬುಧವಾರ ಬೆಳಿಗ್ಗೆ ಕಮಲನಗರ್ ತಾಲೂಕಿನ ಭೋಪಾಳಗಡ್ ಗ್ರಾಮದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭೋಪಾಳಗಡ್ ಗ್ರಾಮದ ನಿವಾಸಿ ನಿರ್ಮಲಾ (32) ಕೊಲೆಗೀಡಾದ ಮಹಿಳೆ. ಆರೋಪಿಯನ್ನು ಅಂಕುಶ್ (35) ಎಂದು ಗುರುತಿಸಲಾಗಿದೆ.
ಕೆಲ ದಿನಗಳಿಂದ ಪತಿ ಪತ್ನಿ ನಡುವೆ ಜಗಳವಾಗುತ್ತಿತ್ತು. ಅದರಿಂದಾಗಿ ಪತ್ನಿಯು ತನ್ನ ತವರು ಮನೆಯಾದ ಬೆಳಕುಣಿ ಗ್ರಾಮಕ್ಕೆ ಹೋಗಿದ್ದಳು. ನಂತರ ತನ್ನ ಗಂಡನ ಮನೆಗೆ ವಾಪಸ್ಸಾಗಿದ್ದ ನಿರ್ಮಲಾ ಬುಧವಾರ ಮುಂಜಾನೆ ಪತಿಯು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ತನ್ನ ಪತ್ನಿಯ ಶೀಲ ಶಂಕಿಸಿ ಕೊಲೆ ಮಾಡಿದ್ದಾನೆ ಎಂಬ ಅನುಮಾನ ವ್ಯಕ್ತವಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಕಮಲನಗರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.